ದೇಶ

ಹೊಡೆಯಲು ಕಲ್ಲು ಎತ್ತಿಕೊಂಡರೆ, ನಾವು ಬಾಂಬ್ ಗಳನ್ನು ಎತ್ತಿಕೊಳ್ಳುತ್ತೇವೆ: ತೆಲಂಗಾಣ ಬಿಜೆಪಿ ಸಂಸದ

Manjula VN

ವರಂಗಲ್: ಎಐಎಂಐಎಂ ಹಾಗೂ ಟಿಆರ್ಎಸ್ ನಾಯಕರು ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಿದರೆ, ಪ್ರತಿಯಾಗಿ ನಾವು ಬಾಂಬ್ ಗಳಿಂದ ಉತ್ತರಿಸುತ್ತೇವೆಂದು ತೆಲಂಗಾಣ ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 

ಪೌರತ್ವ ಕಾಯ್ದೆ ಹಾಗೂ ಪೌರತ್ವ ನೋಂದಣಿ  ವಿರುದ್ಧ ಟೀಕೆ ಮಾಡುತ್ತಿರುವ ಎಐಎಂಐಎಂ ಹಾಗೂ ಟಿಆರ್ಎಸ್ ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿದ ಅವರು, ಗೋಲ್ಕೊಂಡದಲ್ಲಿ ಬಿಜೆಪಿ ಕೇಸರಿ ಧ್ವಜವನ್ನು ಹಾರಿಸಲಿದೆ. 2023ರಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಪೌರತ್ವ ಕಾಯ್ದೆ ವಿರುದ್ಧ ಕೆಸಿ ಚಂದ್ರಶೇಖರ್ ರಾವ್ ಅವರು ರ್ಯಾಲಿಗಳಿಗೆ ಹಣವನ್ನು ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ. 

ಹನುಮಕೊಂಡ ರ್ಯಾಲಿವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ಮುಂದಿನ ದಿನಗಳಲ್ಲಿ ಇವುಗಳಿಗೆ ಪ್ರತಿಕ್ರಿಯೆಯಾಗಿ ಪಕ್ಷದ ಕಾರ್ಯಕರ್ತರು ಬಾಂಬ್ ಹಾಗೂ ಗ್ರೆನೇಡ್ ಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ನಮ್ಮ ಮೇಲೆ ದಾಳಿ ನಡೆಸಲು ಕೋಲು ಹಾಗೂ ಕಲ್ಲುಗಳನ್ನು ಎತ್ತಿಕೊಂಡರೆ, ಇದಕ್ಕೆ ಉತ್ತರ ನೀಡಲು ನಾವು ಶಸ್ತ್ರಾಸ್ತ್ರ ಹಾಗೂ ಬಾಂಬ್, ಗನ್ ಗಳನ್ನು ಎತ್ತಿಕೊಳ್ಳುತ್ತೇವೆ. ಯುದ್ಧ ಈಗಾಗಲೇ ಆರಂಭವಾಗಿದೆ ಎಂದು ತಿಳಿಸಿದ್ದಾರೆ. 

ಹಸಿರು ಧ್ವಜ ಹಾರಾಟಕ್ಕಿಲ್ಲಿ ಜಾಗವಿಲ್ಲ. ತೆಲಂಗಾಣದಲ್ಲಿ ಕೇಸರಿ ಧ್ವಜವನ್ನು ಹಾರಿಸಲಾಗುತ್ತದೆ. 2013ರಲ್ಲಿ ಓವೈಸಿ ಅತ್ಯಂತ ಪ್ರಚೋದನಾಕಾರಿ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಒಬ್ಬ ಹಿಂದೂ ಆಗಿ ಕೆಸಿಆರ್ ಮೌನವಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

SCROLL FOR NEXT