ದೇಶ

ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸಭೆ: ಮಮತಾ ಬ್ಯಾನರ್ಜಿಯಂತೆ ಕಾಂಗ್ರೆಸ್ ಗೆ 'ಕೈ'ಕೊಟ್ಟ ಬಿಎಸ್ ಪಿ 

Sumana Upadhyaya

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ದೇಶಾದ್ಯಂತ ಪ್ರತಿಭಟನೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಸೋಮವಾರ ಕರೆದಿರುವ ವಿರೋಧ ಪಕ್ಷಗಳ ಸಭೆಗೆ ಬಹುಜನ ಸಮಾಜ ಪಕ್ಷ ಕೂಡ ಗೈರಾಗುವ ಸಾಧ್ಯತೆಯಿದೆ.


ಕಾಂಗ್ರೆಸ್ ನೊಂದಿಗಿನ ಭಿನ್ನಾಭಿಪ್ರಾಯದಿಂದ ಬಿಎಸ್ ಪಿ ಸಭೆಗೆ ತನ್ನ ಪ್ರತಿನಿಧಿಯನ್ನು ಕಳುಹಿಸಲಿಕ್ಕಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ತಾನು ಸಭೆಗೆ ಬರುವುದಿಲ್ಲ ಎಂದು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಈ ಹಿಂದೆಯೇ ತಿಳಿಸಿದೆ.


ಕಳೆದ ಡಿಸೆಂಬರ್ 17ರಂದು ವಿರೋಧ ಪಕ್ಷಗಳು ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ತಿದ್ದುಪಡಿ ಪೌರತ್ವ ಮಸೂದೆ, ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಮಧ್ಯ ಪ್ರವೇಶಿಸಬೇಕೆಂದು ಕೇಳಿಕೊಳ್ಳಲು ಹೋಗಿದ್ದವು. ಆದರೆ ಬಿಎಸ್ ಪಿ ಸೇರಿರಲಿಲ್ಲ, ಬಿಎಸ್ ಪಿ ಸಂಸದೀಯ ನಿಯೋಗ ಡಿಸೆಂಬರ್ 18ರಂದು ಭೇಟಿ ಮಾಡಿ ಚರ್ಚೆ ನಡೆಸಿತ್ತು.


ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿರುವ ಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿದ್ದಾರೆ.


ಕಾಂಗ್ರೆಸ್ ಮತ್ತು ಎಡಪಕ್ಷಗಳು ಕೊಳಕು ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದ ಮಮತಾ ಬ್ಯಾನರ್ಜಿ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಸಿಎಎ-ಎನ್ ಆರ್ ಸಿ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ಹೇಳಿದ್ದರು. 

SCROLL FOR NEXT