ದೇಶ

ಜಾಮಾ ಮಸೀದಿ ಪಾಕಿಸ್ತಾನದಲ್ಲಿಲ್ಲ: ಭೀಮ್ ಆರ್ಮಿ ಮುಖ್ಯಸ್ಥನ ಬಂಧಿಸಿದ ದೆಹಲಿ ಪೊಲೀಸರಿಗೆ ಕೋರ್ಟ್ ತರಾಟೆ

Lingaraj Badiger

ನವದೆಹಲಿ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ವಿರುದ್ಧ ಯಾವುದೇ ಸಾಕ್ಷ್ಯಗಳನ್ನು ನೀಡಲು ವಿಫಲವಾದ ದೆಹಲಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡ ದೆಹಲಿ ಕೋರ್ಟ್, ಧಾರ್ಮಿಕ ಕೇಂದ್ರಗಳ ಹೊರಗಡೆ ಸೇರಿದಂತೆ ಜನ ಎಲ್ಲಿಬೇಕಾದರೂ ಶಾಂತಿಯೂತ ಪ್ರತಿಭಟನೆ ಮಾಡಬಹುದು ಎಂದು ಹೇಳಿದೆ.

ಜಾಮೀನು ಕೋರಿ ಚಂದ್ರಶೇಖರ್ ಆಜಾದ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ತೀಸ್ ಹಜಾರಿ ಕೋರ್ಟ್, ದೆಹಲಿ ಪೊಲೀಸರು ಜಾಮಾ ಮಸೀದಿ ಪಾಕಿಸ್ತಾನದಲ್ಲಿರುವಂತೆ ವರ್ತಿಸುತ್ತಿದ್ದಾರೆ. ಒಂದು ವೇಳೆ ಅದು ಪಾಕಿಸ್ತಾನದಲ್ಲಿದ್ದರೂ ಸಹ ಜನ ಅಲ್ಲಿಯೂ ಶಾಂತಿಯುತ ಪ್ರತಿಭಟನೆ ಮಾಡುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದೆ.

ಜಾಮಾ ಮಸೀದಿ ಸೇರಿದಂತೆ  ಧಾರ್ಮಿಕ ಕೇಂದ್ರಗಳ ಹೊರಗೆ ಪ್ರತಿಭಟನೆ ನಡೆಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಸರ್ಕಾರಿ ವಕೀಲರು ಕೋರ್ಟ್ ತಿಳಿಸಿದರು. ಇದರಿಂದ ಆಕ್ರೋಶಗೊಂಡ ನ್ಯಾಯಾಧೀಶೆ ಕಾಮಿನಿ ಲಾವ್ ಅವರು, ಜಾಮಾ ಮಸೀದಿ ಹೊರಗಡೆ ಪ್ರತಿಭಟನೆ ನಡೆಸಿದರೆ ತಪ್ಪೇನು? ಜಾಮಾ ಮಸೀದಿ ಪಾಕಿಸ್ತಾನದಲ್ಲಿದೆಯೇ? ಎಂದು ಪ್ರಶ್ನಿಸಿದರು.

ಕಾಯ್ದೆಗೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳನ್ನು ಸಂಸತ್ತಿನ ಒಳಗೇ ಹೇಳಬೇಕು. ಹೇಳದಿದ್ದರೆ ಜನ ಬೀದಿಗಿಳಿಯುತ್ತಾರೆ. ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಮಗೆ ಸಂಪೂರ್ಣ ಹಕ್ಕು ಇದೆ. ಆದರೆ ದೇಶ ಹಾಳುಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ಜಾಮಾ ಮಸೀದಿ ಬಳಿ ನಡೆದ ಪ್ರತಿಭಟನೆ ವೇಳೆ ಆಜಾದ್ ಅವರು ಪ್ರಚೋದನಾತ್ಮಕ ಭಾಷಣ ಮಾಡಿದ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಕೋರ್ಟ್ ದೆಹಲಿ ಪೊಲೀಸರಿಗೆ ಸೂಚಿಸಿದೆ. ಆದರೆ ಜಮಾ ಮಸೀದಿ ಬಳಿ ಜನ ಸೇರಿದ ಬಗ್ಗೆ ನಮ್ಮ ಬಳಿ ದ್ರೋಣ್ ಚಿತ್ರ ಬಿಟ್ಟರೆ ಬೇರೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ.

ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಡಿಸೆಂಬರ್ 21ರಂದು ರಾಷ್ಟ್ರೀಯ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಮಧ್ಯ ದೆಹಲಿಯ ದರಿಯಾಗಂಜ್ ಪ್ರಾಂತ್ಯದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತು ಇತರರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಪ್ರತಿಭಟನೆಯ ವೇಳೆ ಚಂದ್ರಶೇಖರ್ ಅವರು ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ಪೊಲೀಸರನ್ನು ಅವರನ್ನು ಬಂಧಿಸಿದ್ದರು.

SCROLL FOR NEXT