ದೇಶ

ಸೋನಿಯಾ ಗಾಂಧಿ ರಾಜೀವ್ ಹಂತಕರನ್ನು ಕ್ಷಮಿಸಿದಂತೆ ನಿರ್ಭಯಾ ಅಪರಾಧಿಗಳನ್ನು ಕ್ಷಮಿಸಿಬಿಡಿ: ವಕೀಲೆ ಇಂದಿರಾ ಜೈಸಿಂಗ್

Sumana Upadhyaya

ನವದೆಹಲಿ: ತಮ್ಮ ಮಗಳನ್ನು ಅತ್ಯಾಚಾರವೆಸಗಿ ಸಾವಿಗೆ ಕಾರಣರಾದ ಅಪರಾಧಿಗಳನ್ನು ಕ್ಷಮಿಸುವಂತೆ ನಿರ್ಭಯಾ ತಾಯಿ ಆಶಾ ದೇವಿಗೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿರುವುದು ವ್ಯಾಪಕ ಟೀಕೆ ಮತ್ತು ಸುದ್ದಿಗೆ ಗ್ರಾಸವಾಗಿದೆ. 


ಅಪರಾಧಿಗಳನ್ನು ಗಲ್ಲಿಗೇರಿಸುವ ವಿಚಾರದಲ್ಲಿ ಆಗುತ್ತಿರುವ ವಿಳಂಬ ಕುರಿತು ಸುದ್ದಿಸಂಸ್ಥೆಗಳಿಗೆ ತಮ್ಮ ಬೇಸರ ವ್ಯಕ್ತಪಡಿಸಿದ ಆಶಾ ದೇವಿಯ ಕುರಿತು ಅಡ್ವೊಕೇಟ್ ಜೈಸಿಂಗ್ ಹೀಗೆ ಹೇಳಿದ್ದಾರೆ.


ಈ ಕುರಿತು ಟ್ವೀಟ್ ಮಾಡಿರುವ ಅವರು, ಆಶಾ ದೇವಿ ಸೋನಿಯಾ ಗಾಂಧಿಯವರನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬೇಕು. ಸೋನಿಯಾ ಗಾಂಧಿಯವರು ತಮ್ಮ ಪತಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದ ನಳಿನಿಗೆ ಕ್ಷಮೆ ನೀಡಿದ್ದಾರೆ. ಅದೇ ರೀತಿ ಆಶಾ ದೇವಿಯವರು ಕೂಡ ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿ ಸಾವಿಗೆ ಕಾರಣರಾದವನ್ನು ಕ್ಷಮಿಸಬೇಕೆಂದು ಹೇಳಿದ್ದಾರೆ. 


ಆಶಾ ದೇವಿಯವರ ನೋವು ನನಗೆ ಅರ್ಥವಾಗುತ್ತದೆ, ಆದರೂ ಅವರು ಸೋನಿಯಾ ಗಾಂಧಿಯವರನ್ನು ನೋಡಿ ಕಲಿಯಬೇಕು. ತಮ್ಮ ಪತಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ್ದ ಅಪರಾಧಿಗೆ ಮರಣದಂಡನೆ ಶಿಕ್ಷೆ ಕೊಡಿಸದೆ ಕ್ಷಮಾದಾನ ನೀಡಿದ್ದಾರೆ. ಹಾಗೆಯೇ ಆಶಾ ದೇವಿಯವರು ಅಪರಾಧಿಗಳನ್ನು ಮರಣದಂಡನೆಯಿಂದ ತಪ್ಪಿಸಬೇಕು, ನಾವು ಆಶಾ ದೇವಿ ಪರ ಇದ್ದೇವೆ, ಆದರೆ ಮರಣದಂಡನೆಯನ್ನು ವಿರೋಧಿಸುತ್ತೇವೆ ಎಂದು ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದಾರೆ.


1991ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ನಳಿನಿ ಬಂಧನಕ್ಕೊಳಗಾಗಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ.


ವಿನಯ್, ಅಕ್ಷಯ್, ಪವನ್ ಮತ್ತು ಮುಕೇಶ್ ಸಿಂಗ್ ಎಂಬುವವರನ್ನು ನಿರ್ಭಯಾ ಅತ್ಯಾಚಾರ ಮತ್ತು ನಂತರ ಸಾವಿನ ಕೇಸಿನಲ್ಲಿ ಅಪರಾಧಿಗಳೆಂದು ದೆಹಲಿ ನ್ಯಾಯಾಲಯ ಘೋಷಿಸಿ ಜನವರಿ 22ರಂದು ಅವರನ್ನು ನೇಣಿಗೇರಿಸುವುದು ಎಂದು ಆದೇಶ ಹೊರಡಿಸಿತ್ತು. ಆದರೆ ಅದರಲ್ಲಿ ಮುಕೇಶ್ ಸಿಂಗ್ ಮತ್ತು ವಿನಯ್ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲಯ ಇದೀಗ ಫೆಬ್ರವರಿ 1ರಂದು ನೇಣಿಗೇರಿಸುವಂತೆ ಹೊಸ ಆದೇಶ ಹೊರಡಿಸಿದೆ.

SCROLL FOR NEXT