ದೇಶ

ದೆಹಲಿ ಚುನಾವಣೆ ಟಿಕೆಟ್‌ಗಾಗಿ 10 ಕೋಟಿ ರೂ ಕೇಳಿದ್ದರು: ಆಪ್ ತೊರೆದು ಕಾಂಗ್ರೆಸ್ ಸೇರಿದ ಶಾಸಕ ಆದರ್ಶ ಶಾಸ್ತ್ರಿ

Srinivasamurthy VN

ನವದೆಹಲಿ: ದೆಹಲಿ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷದ ಟಿಕೆಟ್ ನೀಡಲು ಸಿಎಂ ಅರವಿಂದ್ ಕೇಜ್ರಿವಾಲ್ 10 ಕೋಟಿ ಹಣ ಕೇಳಿದ್ದರು ಎಂದು ಆಪ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಶಾಸಕ ಆದರ್ಶ್ ಶಾಸ್ತ್ರಿ ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ರಾಜಕೀಯ ಪಕ್ಷಗಳ ಟಿಕೆಟ್ ಗಾಗಿ ಹಗ್ಗಜಗ್ಗಾಟ ಮುಂದುವರೆದಿದ್ದು, ಇತ್ತ ಟಿಕೆಟ್ ನೀಡಲು ನೀಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 10 ಕೋಟಿ ರೂ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಎಎಪಿಯ ದ್ವಾರಕಾ ಕ್ಷೇತ್ರದ ಶಾಸಕ, ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ಆದರ್ಶ ಶಾಸ್ತ್ರಿ ಆರೋಪಿಸಿದ್ದಾರೆ. 

ಶನಿವಾರವಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾದ ಆದರ್ಶ್ ಶಾಸ್ತ್ರಿ, ಆಮ್ ಆದ್ಮಿ ಪಕ್ಷ (ಎಎಪಿ)ವು 2020ರ ದೆಹಲಿ ವಿಧಾನಸಭೆ ಚುನಾವಣೆಯ ಟಿಕೆಟ್‌ಗಳನ್ನು 10-20 ಕೋಟಿ ರೂ ಗಳಿಗೆ ಮಾರಾಟ ಮಾಡಿದೆ ಎಂದು ದೂರಿದ್ದಾರೆ. 

ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ದ್ವಾರಕಾದಿಂದ ಮತ್ತೆ ಸ್ಪರ್ಧಿಸಲು ಇಚ್ಛಿಸಿದ್ದ ಶಾಸ್ತ್ರಿ ಅವರಿಗೆ ಟಿಕೆಟ್ ನೀಡಲು ಆಪ್ ನಿರಾಕರಿಸಿತ್ತು. ಅಲ್ಲದೆ ದ್ವಾರಕಾದಿಂದ ವಿನಯ್ ಮಿಶ್ರಾ ಅವರನ್ನು ಕಣಕ್ಕಿಳಿಸಿದ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡು ಪಕ್ಷವನ್ನು ತೊರೆದಿದ್ದರು.  ಈ ಹಿಂದೆಯೂ ಎಎಪಿ ವಿರುದ್ಧ ಇಂತದ್ದೇ ಆರೋಪ ಕೇಳಿಬಂದಿತ್ತು. ಲೋಕಸಭಾ ಚುನಾವಣೆಯಲ್ಲಿ ಎಎಪಿಯ ಪಶ್ಚಿಮ ದೆಹಲಿಯ ಅಭ್ಯರ್ಥಿಯಾಗಿದ್ದ ಬಲ್ಬೀರ್ ಸಿಂಗ್ ಜಾಖರ್ ಅವರ ಪುತ್ರ, ಟಿಕೆಟ್ ಪಡೆಯಲು ತನ್ನ ತಂದೆ ಅರವಿಂದ್‌ ಕೇಜ್ರಿವಾಲ್‌ಗೆ ಹಣ ಪಾವತಿಸಿದ್ದರು ಎಂದು ದೂರಿದ್ದರು. 

SCROLL FOR NEXT