ದೇಶ

ಇಂದು ಪ್ರಧಾನಿ ಮೋದಿಯವರ  'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮ: 2000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ 

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೋಮವಾರ 'ಪರೀಕ್ಷಾ ಪೆ ಚರ್ಚಾ 2020'ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು ದೇಶಾದ್ಯಂತ ಸುಮಾರು 2000 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಲಿದ್ದಾರೆ.


ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಯವರು ಮೂರನೇ ಬಾರಿ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು ದೆಹಲಿಯ ಟಲ್ಕಟೊರಾ ಸ್ಟೇಡಿಯಂನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ.


ವಿದ್ಯಾರ್ಥಿಗಳೊಂದಿಗೆ ಪ್ರಧಾನಿಯವರು ಸಂವಾದ ನಡೆಸುತ್ತಾ ಅವರು ಪರೀಕ್ಷಾ ಒತ್ತಡವನ್ನು ಹೇಗೆ ಎದುರಿಸಬೇಕು, ಪರೀಕ್ಷೆ ಸಮಯದಲ್ಲಿ ಹೇಗೆ ಅಧ್ಯಯನ ಮಾಡಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಹೇಳಿಕೊಡಲಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮೈಗವರ್ನ್ ಮೆಂಟ್ ಜೊತೆ ಈಗಾಗಲೇ ಐದು ವಿವಿಧ ವಿಷಯಗಳನ್ನಿಟ್ಟುಕೊಂಡು 9ರಿಂದ 12ನೇ ತರಗತಿಯೊಳಗಿನ ಮಕ್ಕಳಿಗೆ ಸಣ್ಣ ಪ್ರಬಂಧ ಸ್ಪರ್ಧೆ ನಡೆಸಿಕೊಟ್ಟಿತ್ತು. ಇದರ ಮೂಲಕ ಇಂದಿನ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ 1,050 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 


ಈ ಕಾರ್ಯಕ್ರಮವನ್ನು ಮತ್ತಷ್ಟು ವಿದ್ಯಾರ್ಥಿ ಕೇಂದ್ರವಾಗಿಸಲು ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರ ಸಮ್ಮುಖದಲ್ಲಿ ಭಾಗವಹಿಸಿ ಅವರೊಂದಿಗೆ ಚರ್ಚೆ, ಸಂವಾದ ನಡೆಸಲು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಉತ್ಸುಕವಾಗಿದ್ದಾರೆ. 


ಪ್ರಧಾನಿಯವರ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು 2018ರಲ್ಲಿ ಮೊದಲ ಸಲ ಇದೇ ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿತ್ತು.

SCROLL FOR NEXT