ದೇಶ

ಕೊರೋನಾ ವೈರಸ್: ಭಾರತದಲ್ಲೂ ತೀವ್ರ ಕಟ್ಟೆಚ್ಚರ, 7 ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ

Manjula VN

ನವದೆಹಲಿ: ಚೀನಾದಲ್ಲಿ ಕೊರೋನಾ ವೈರಸ್ ವ್ಯಾಧಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ಆರೋಗ್ಯ ಸಚಿವಾಲಯವರು ಬೆಂಗಳೂರು ಸೇರಿದಂತೆ ದೇಶದ 7 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಚೀನಾದಿಂದ ಆಗಮಿಸುವ ಪ್ರವಾಸಿಗರ ಆರೋಗ್ಯ ತಪಾಸಣೆ ಆರಂಭಿಸಿದೆ. ಅಲ್ಲದೆ, ಚೀನಾಗೆ ತೆರಳುವ ಭಾರತೀಯ ಪ್ರವಾಸಿಗರಿಗೆ ಕೆಲವು ಸಲಹಾ ರೂಪದ ಮುಂಜಾಗ್ರತಾ ಎಚ್ಚರಿಕೆಗಳನ್ನು ನೀಡಲು ಆರಂಭಿಸಿದೆ. 

ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಹೈದರಾಬಾದ್ ಹಾಗೂ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಲಲ್ಲಿ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಸಚಿವಾಲಯವು ವಿಮಾನ ನಿಲ್ದಾಣಗಳ ಆರೋಗ್ಯ ವಿಭಾಗಗಳಿಗೆ ಸೂಚಿಸಿದೆ. ಈ ಪ್ರಕಾರ ತಪಾಸಣೆ ಈಗಾಗಲೇ ಆರಂಭವಾಗಿದ್ದು, ಜನವರಿ 22ರವರೆಗೆ 60 ವಿಮಾನಗಳಲ್ಲಿ ಆಗಮಿಸಿದ 12,828 ಪ್ರಯಾಣಿಕರನ್ನು ತಪಾಸಣೆ ನಡೆಸಿದೆ. ಆದರೆ, ಈವರೆಗೂ ಯಾವುದೇ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. 

ಇದೇ ವೇಳೆ ಚೀನಾದಿಂದ ಆಗಮಿಸುವ ಪ್ರಯಾಣಿಕರು ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಗಂಟಲು ಕಟ್ಟುವಿಕೆ, ನೆಗಡಿ ಇತ್ಯಾದಿ ಸಮಸ್ಯೆಗದಳನ್ನು ಎದುರಿಸಲು ಆರಂಭಿಸಿದರೆ, ಕೂಡಲೇ ಸಮೀಪದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದೂ ಕೂಡ ಸಲಹೆ ನೀಡಲಾಗಿದೆ. 

ಕೊರೋನಾ ವೈರಸ್ ಹಬ್ಬಿದ್ದು ಚೀನಾದ ವುಹಾನ್ ಮೂಲಕ. ಆದರೆ, ಅದೇ ನಗರದ ಸುತ್ತಮುತ್ತ 700 ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಇನ್ನಿತರೆ ಕೋರ್ಸುಗಳನ್ನು ವ್ಯಾಸಾಂಗ ಮಾಡುತ್ತಿದ್ದಾರೆ. ಆ ಪೈಕಿ ಬಹುತೇಕ ಮಂದಿ ರಜೆ ಕಾರಣ ತಾಯ್ನಾಡಿಗೆ ಮರಳಿದ್ದರೆ, ಇನ್ನೂ ಕೆಲವರು ಅಲ್ಲಿಯೇ ಉಳಿದುಕೊಂಡಿದ್ದಾರೆ. 

SCROLL FOR NEXT