ದೇಶ

ಚೀನಾದಲ್ಲಿ ಕೊರೋನಾ ವೈರಸ್: ಭಾರತೀಯರ ಸ್ಥಳಾಂತರ ಪ್ರಕ್ರಿಯೆ ಆರಂಭ- ಎಂಇಎ

Nagaraja AB

ನವದೆಹಲಿ: ಚೀನಾದ ಹುಬೈ ಪ್ರಾಂತ್ಯದಲ್ಲಿ ಕೊರೋನಾ ವೈರಸ್ ಕಂಡುಬಂದಿರುವುದರಿಂದ ಅಲ್ಲಿನ ಭಾರತೀಯರನ್ನು ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ

ಹುಬೆ ಪ್ರಾಂತ್ಯದಿಂದ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಬೀಜಿಂಗ್ ನಲ್ಲಿರುವ ಭಾರತೀಯ ರಾಯಬಾರಿಗಳು ಚೀನಾ ಸರ್ಕಾರ, ಆಡಳಿತ ಸಂಸ್ಥೆ ಮತ್ತು ಪ್ರಜೆಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಕೊರೋನಾ ವೈರಸ್ ನಿಂದ ಚೀನಾದಲ್ಲಿ ಮೃತ ಪಟ್ಟವರ ಸಂಖ್ಯೆ 106ಕ್ಕೆ ಏರಿಕೆ ಆಗಿದ್ದು, 1300 ಹೊಸ ಪ್ರಕರಣಗಳು ದೃಢಪಟ್ಟಿವೆ. ಚೀನಾದಿಂದ ಆಗಮಿಸುವ ಪ್ರಯಾಣಿಕರಲ್ಲಿ ಸೋಂಕು ಪತ್ತೆಗಾಗಿ ತಪಾಸಣೆ ನಡೆಸಲಾಗುತ್ತಿದೆ

ಕೊರೋನಾ ವೈರಸ್ ಒಂದು ಹೊಸ ರೀತಿಯ ನ್ಯೂಮೊನಿಯಾವಾಗಿದೆ. 2019ರಲ್ಲಿ ಇದನ್ನು ಅಧಿಕೃತವಾಗಿ ಎನ್ ಸಿಒವಿ ಎಂದು ಕರೆಯಲಾಗುತಿತ್ತು. ಚೀನಾದ  ವುಹಾನ್ ಮತ್ತಿತರ 17 ಕಡೆಗಳಲ್ಲಿ ಈ ಸೋಂಕು ಹೆಚ್ಚಾಗಿದೆ. 250 ರಿಂದ 300 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವುಹಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಚೀನಾ ಮತ್ತಿತರ ಕಡೆಗಳಲ್ಲಿ ಕೊರೋನಾ ವೈರಸ್ ನಿಂದಾಗುತ್ತಿರುವ ಸಾವಿನ ಪ್ರಕರಣಗಳ ಬಗ್ಗೆ ಪರಾಮರ್ಶೆ ನಡೆಸಲಾಗಿದೆ. ಭಾರತದಲ್ಲಿ 450 ಮಂದಿಯನ್ನು ವೈದ್ಯಕೀಯ ವೀಕ್ಷಣೆಯಲ್ಲಿ ಇಡಲಾಗಿದೆ.

SCROLL FOR NEXT