ದೇಶ

ಕೊರೋನಾ ವೈರಸ್: ಚೀನಾದಿಂದ ಭಾರತೀಯರ ಸ್ಥಳಾಂತರಕ್ಕೆ ಏರ್ ಇಂಡಿಯಾ ಸಜ್ಜು

Manjula VN

ನವದೆಹಲಿ: ಮಾರಕ ಕೊರೋನಾ ವೈರಸ್'ನ ಕೇಂದ್ರ ಸ್ಥಳವಾಗಿರುವ ಚೀನಾದ ವುಹಾನ್ ನಗರದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಾಂಗ ಮಾಡುತ್ತಿರುವ 700ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ತೆರವುಗೊಳಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ. 

ಸೋಮವಾರ ಇಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರ ವಿದೇಶಾಂಗ ಸಚಿವಾಲಯವು ಚೀನಾ ಅಧಿಕಾರಿಗಳಿಗೆ ಭಾರತೀಯರ ತೆರವು ಕಾರ್ಯಾಚರಣೆಗೆ ಕೋರಿಕೆ ಸಲ್ಲಿಸಲಿದೆ. ಇದಕ್ಕಾಗಿ ಏರ್ ಇಂಡಿಯಾ ವಿಮಾನವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. 

ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ವುಹಾನ್ ನಗರವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಅಲ್ಲಿ ನೆಲೆಸಿರುವ ಭಾರತೀಯರು ಅತಂತ್ರರಾಗಿದ್ದಾರೆ. ಇದೇ ವೇಳೆ ಅಮೆರಿಕಾ, ಜಪಾನ್ ದೇಶಗಳು ವುಹಾನ್ ನಿಂದ ತಮ್ಮ ನಾಗರೀಕರನ್ನು ತೆರವುಗೊಳಿಸಲು ಚೀನಾಕ್ಕೆ ವಿಶೇಷ ವಿಮಾನವನ್ನು ಕಳುಹಿಸಿಕೊಟ್ಟಿವೆ. 

ಕೊರೋನಾ ವೈರಸ್ ಸೋಂಕು ಭಾರತಕ್ಕೂ ಕಾಲಿಡುವ ಭೀತಿ ಹಿನ್ನೆಲೆಯಲ್ಲಿ ದೇಶದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದ. ಬೆಂಗಳೂರು ಸೇರಿ ದೇಶದ ವಿವಿಧೆಡೆ ಚೀನಾದಿಂದ ಬಂದ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 

ಬಿಹಾರ, ಮುಂಬೈನಲ್ಲಿ ತಲಾ ಒಬ್ಬರು ಮತ್ತು ಹೈದರಾಬಾದ್ ನಲ್ಲಿ ಹೊಸದಾಗಿ ನಾಲ್ವರು ರೋಗಿಗಳಿಗೆ ಸೋಂಕು ತಗುಲಿರುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೇರಳದಲ್ಲಿ ಇತ್ತೀಚೆಗೆ ಚೀನಾದಿದ ಮರಳಿದ 436 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಗೆ ಕಳುಹಿಸಲಾಗಿದ್ದು, ಸೋಂಕು ಪತ್ತೆಯಾಗಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. 

SCROLL FOR NEXT