ದೇಶ

ನಿರ್ಭಯಾ ಪ್ರಕರಣ: ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ತಡೆಯಾಜ್ಞೆ

Lingaraj Badiger

ನವದೆಹಲಿ: ಮುಂದಿನ ಆದೇಶದವರೆಗೆ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸದಂತೆ ದೆಹಲಿ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ತನಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಅಪರಾಧಿ ವಿನಯ್ ಕುಮಾರ್ ಶರ್ಮಾ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ ದೆಹಲಿಯ ಪಟಿಯಾಲ ಹೌಸ್ ಕೋರ್ಟ್, ಶರ್ಮಾ ಹಾಗೂ ಇತರೆ ಮೂವರು ಅಪರಾಧಿಗಳಿಗೂ ನಾಳೆ ಗಲ್ಲು ಶಿಕ್ಷೆ ಜಾರಿಗೊಳಿಸದಂತೆ ಆದೇಶಿಸಿದೆ.

ನಿರ್ಭಯಾ ಅಪರಾಧಿಗಳಿಗೆ ಮೇಲ್ಮನವಿಗಳನ್ನು ಸಲ್ಲಿಸಲು ಇನ್ನೂ ಕಾನೂನಿನಲ್ಲಿ ಅವಕಾಶವಿರುವ ಹಿನ್ನೆಲೆಯಲ್ಲಿ ಅವರನ್ನು ನೇಣಿಗೇರಿಸಲು ಸಮಯ ನಿಗದಿಪಡಿಸಿದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದರು.

ದೆಹಲಿ ಬಂಧಿಖಾನೆ ನಿಯಮದ ಪ್ರಕಾರ, ಒಂದೇ ಅಪರಾಧದ ನಾಲ್ವರು ಆರೋಪಿಗಳಲ್ಲಿ ಯಾರೊಬ್ಬರ ಕಾನೂನು ಅವಕಾಶಗಳು ಬಾಕಿಯಿದ್ದರೂ, ಉಳಿದವರನ್ನು ಗಲ್ಲಿಗೇರಿಸುವಂತಿಲ್ಲ ಎಂದು ವಾದಿಸಿದರು.

ಆದರೆ ತಿಹಾರ್ ಜೈಲಾಧಿಕಾರಿಗಳು, ನ್ಯಾಯಾಲಯದ ಆದೇಶದಂತೆ ಉಳಿದ ಮೂವರನ್ನು ಗಲ್ಲಿಗೇರಿಸಬಹುದು ಎಂದು ವಾದ ಮಂಡಿಸಿದ್ದರು. ಜೈಲು ಅಧಿಕಾರಿಗಳ ವಾದ ಒಪ್ಪದ ಕೋರ್ಟ್, ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದೆ.

SCROLL FOR NEXT