ದೇಶ

ಮಧ್ಯಪ್ರದೇಶ ಸಂಪುಟ ವಿಸ್ತರಣೆ: ಜ್ಯೋತಿರಾದಿತ್ಯ ಸಿಂಧಿಯಾ 12 ಆಪ್ತರು ಸೇರಿ 28 ಮಂದಿಗೆ ಸಚಿವ ಸ್ಥಾನ

Shilpa D

ಭೂಪಾಲ್: ಶಿವರಾಜ್ ಸಿಂಗ್ ಚೌಹಾನ್ ಅಧಿಕಾರಕ್ಕೆ ಬಂದ ನಂತರ ಎರಡನೇ ಬಾರಿಗೆ ಮಧ್ಯಪ್ರದೇಶದ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. 

ತಮ್ಮ 2ನೇ ಸಂಪುಟ ವಿಸ್ತರಣೆಯಲ್ಲಿ 28 ಹೊಸ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ.  20 ಕ್ಯಾಬಿನೆಟ್ ಮಂತ್ರಿಗಳು ಮತ್ತು 8 ರಾಜ್ಯಖಾತೆ ಸಚಿವರಿಗೆ ರಾಜ್ಯಪಾಲ ಆನಂದಿಬೆನ್ ಪಟೇಲ್ ಪ್ರಮಾಣವಚನ ಬೋಧಿಸಿದರು.

2ನೇ ಬಾರಿಗೆ ವಿಸ್ತರಣೆಯಾಗಿರುವ ಸಂಪುಟ ವಿಸ್ತರಣೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಆಪ್ತರಿಗೆ ಹೆಚ್ಚಿನ ಸ್ಥಾನ ನೀಡಲಾಗಿದೆ. 28 ಮಂದಿ ಸಚಿವರಲ್ಲಿ 12 ಮಂದಿ ಸಿಂಧಿಯಾ ಆಪ್ತರಾಗಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಹಾಗೂ ಸರ್ಕಾರ ರಚನೆಗೆ ಕಾರಣರಾದ ಸಿಂಧಿಯಾ ಆಪ್ತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಅನಿವಾರ್ಯ . ಹೀಗಾಗಿ ಸಂಪುಟ ವಿಸ್ತರಣೆಯಲ್ಲಿ ಶಿವರಾಜ್ ಸಿಂಗ್ ಸ್ಥಾನ ನೀಡಿದ್ದಾರೆ.

ಹೊಸ ಸಚಿವರಲ್ಲಿ  15 ಮಂದಿ ಹೊಸ ಮುಖಗಳಿದ್ದು ಉಳಿದ 13 ಮಂದಿ ಹಿರಿಯ ಸಚಿವರಾಗಿದ್ದಾರೆ. ಗುರುವಾರ ಪ್ರಮಾಣವಚನ ಸ್ವೀಕರಿಸಿದ ಸಿಂಧಿಯಾ ನಿಷ್ಠಾವಂತರಲ್ಲಿ ಕಮಲ್ ನಾಥ್ ಸರ್ಕಾರದ ನಾಲ್ಕು ಮಂತ್ರಿಗಳಾದ ಇಮಾರ್ತಿ ದೇವಿ, ಎಂ.ಎಸ್.ಸಿಸೋಡಿಯಾ, ಪ್ರದಮ್  ಸಿಂಗ್ ತೋಮರ್ ಮತ್ತು ಪ್ರಭುರಾಮ್ ಚೌಧರಿ ಸೇರಿದ್ದಾರೆ. ಗ್ವಾಲಿಯರ್-ಚಂಬಲ್ ಪ್ರದೇಶದ (ಸಿಂಧಿಯಾ ಮೂಲದ ಪ್ರದೇಶ) ಗರಿಷ್ಠ 10 ಮಂತ್ರಿಗಳು ಇದ್ದರೆ, ಒಂಬತ್ತು  ಮಂತ್ರಿಗಳು ಮಾಲ್ವಾ-ನಿಮಾರ್ ಪ್ರದೇಶದವರಾಗಿದ್ದಾರೆ.

ಶಿವರಾಜ್ ಸಿಂಗ್ ಚೌಹಾನ್ ಅವರ ಹಿಂದಿನ ಸರ್ಕಾರದಿಂದ ಕೇವಲ ಐದು ಸದಸ್ಯರನ್ನು ಮಾತ್ರ ವಿಸ್ತರಿಸಿದ ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದೆ. ಅವರಲ್ಲಿ ಗೋಪಾಲ್ ಭಾರ್ಗವ, ವಿಜಯ್ ಷಾ, ಯಶೋಧರಾ ರಾಜೆ ಸಿಂಧಿಯಾ, ಮತ್ತು ಚೌಹಾನ್ ನಿಷ್ಠಾವಂತರಾದ ಭೂಪೇಂದ್ರ ಸಿಂಗ್ ಮತ್ತು ವಿಶ್ವಾಸ್ ಸಾರಂಗ್ ಸೇರಿದ್ದಾರೆ.

ಈಗಿನ ಲಾಲ್ ಜೀ ಟಂಡನ್ ಆಸ್ಪತ್ರೆಗೆ ದಾಖಲಾದಾಗಿನಿಂದ ಯುಪಿ ಗವರ್ನರ್ ಆನಂದಿಬೆನ್ ಪಟೇಲ್ ಅವರು ಹೆಚ್ಚುವರಿ ಉಸ್ತುವಾರಿ ರಾಜ್ಯಪಾಲರಾಗಿ ಭೋಪಾಲ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಕ್ಯಾಬಿನೆಟ್ ವಿಸ್ತರಣೆಯಾಗಿದೆ. ಪ್ರಮಾಣವಚನ ಸಮಾರಂಭದ ನಂತರ ಅವರು ಗುರುವಾರ ಮತ್ತೆ ಲಕ್ನೋಗೆ ತೆರಳಲಿದ್ದಾರೆ.

SCROLL FOR NEXT