ದೇಶ

ಸ್ವದೇಶಿ ನಿರ್ಮಿತ 11,300 ವೆಂಟಿಲೇಟರ್ ಗಳನ್ನು ರವಾನಿಸಲಾಗಿದೆ: ಡಾ. ಹರ್ಷವರ್ಧನ್

Srinivasamurthy VN

ನವದೆಹಲಿ: ದೇಶದಲ್ಲಿ ಈ ವರೆಗೂ 11,300 ಸ್ವದೇಶಿ ನಿರ್ಮಿತ ವೆಂಟಿಲೇಟರ್ ಗಳನ್ನು ರವಾನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್ ಹೇಳಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಹರ್ಷವರ್ಧನ್ ಅವರು, ದೇಶದಲ್ಲಿ ಈ ವರೆಗೂ 11,300 ಸ್ವದೇಶಿ ನಿರ್ಮಿತ ವೆಂಟಿಲೇಟರ್ ಗಳನ್ನು ರವಾನೆ ಮಾಡಲಾಗಿದ್ದು, ಈ ಪೈಕಿ 6,154 ವೆಂಟಿಲೇಟರ್ ಗಳನ್ನು ಈಗಾಗಲೇ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ. ಅಂತೆಯೇ ಈ ವರೆಗೂ ದೇಶಾದ್ಯಂತ 1.02 ಲಕ್ಷ ಆಕ್ಸಿಜನ್ ಸಿಲಿಂಡರ್ ಗಳನ್ನು ಸಪ್ಲೈ ಮಾಡಲಾಗಿದ್ದು, ಈ ಪೈಕಿ 72,293 ಸಿಲಿಂಡರ್ ಗಳನ್ನು ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.

ಇನ್ನು ಕೊರೋನಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆಗಳ ಉತ್ಪಾದನೆ ಪ್ರಮಾಣ ಹೆಚ್ಚಿಸಲಾಗಿದ್ದು, ದೇಶಾದ್ಯಂತ 6.12 ಕೋಟಿ ಮಾತ್ರೆಗಳನ್ನು ರವಾನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.

ಭಾರತದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ನಿನ್ನೆ ಒಂದೇ ದೇಶದಲ್ಲಿ 22,771 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 6.49 ಲಕ್ಷಕ್ಕೇರಿದ್ದು, ನಿನ್ನೆ ಒಂದೇ ದಿನ 442 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 18655ಕ್ಕೆ ಏರಿಕೆಯಾಗಿದೆ. ಇದೇ ವೇಳೆ 3,94,227 ಮಂದಿ ಸೋಂಕಿತರ ಪೈಕಿ 648315 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನು ದೇಶದಲ್ಲಿ 235433 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.  

SCROLL FOR NEXT