ದೇಶ

ಕೇರಳದ ತಿರುವನಂತಪುರದಲ್ಲಿ ಇನ್ನೊಂದು ವಾರ ಟ್ರಿಪಲ್ ಲಾಕ್ ಡೌನ್: ತುರ್ತು ಸೇವೆ ಹೊರತುಪಡಿಸಿ ಬೇರೆಲ್ಲಾ ಬಂದ್!

Sumana Upadhyaya

ತಿರುವನಂತಪುರಂ:ಸ್ಥಳೀಯ ಸಂಪರ್ಕದಿಂದ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಅಲ್ಲಿನ ಸರ್ಕಾರ ಟ್ರಿಪಲ್ ಲಾಕ್ ಡೌನ್(ಹೆಚ್ಚಿನ ನಿರ್ಬಂಧ) ಘೋಷಿಸಿ ಮುಂದಿನ ಒಂದು ವಾರ ನಗರವನ್ನು ಸಂಪೂರ್ಣ ಬಂದ್ ಮಾಡಿದೆ.

ಇಂದು ಸಂಜೆ 6 ಗಂಟೆಯಿಂದ ತ್ರಿವಳಿ ಲಾಕ್ ಡೌನ್ ತಿರುವನಂತಪುರ ನಗರದಲ್ಲಿ ಜಾರಿಗೆ ಬರಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ವೈದ್ಯಕೀಯ ತುರ್ತು ಹೊರತುಪಡಿಸಿ ನಗರದ ಜನತೆಯನ್ನು ಇನ್ನೊಂದು ವಾರ ಹೊರಗೆ ಬಿಡಲಾಗುವುದಿಲ್ಲ.

ಸರ್ಕಾರಿ, ಖಾಸಗಿ ಮತ್ತು ಸಚಿವಾಲಯ ಕಚೇರಿಗಳು ತಿರುವನಂತಪುರದಲ್ಲಿ ಇನ್ನೊಂದು ವಾರ ಮುಚ್ಚಿರುತ್ತವೆ. ಕೇವಲ ನಗರಕ್ಕೆ ತುರ್ತು ಕೆಲಸಗಳಿಗೆ ಬರುವವರಿಗೆ ಮಾತ್ರ ಇನ್ನೊಂದು ವಾರ ಅವಕಾಶವಿದ್ದು ಪುನಃ ಹೊರಗೆ ಹೋಗಲು ಸಾಧ್ಯವಿಲ್ಲ. ಯಾವುದೇ ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಬಿಡುವುದಿಲ್ಲ.

ನಗರದಲ್ಲಿ ನ್ಯಾಯಾಲಯಗಳು ಸಹ ಇನ್ನೊಂದು ವಾರ ಮುಚ್ಚಿರುತ್ತದೆ. ತುರ್ತು ವಿಚಾರಣೆ, ಜಾಮೀನು ಅರ್ಜಿ ಇತ್ಯಾದಿಗಳನ್ನು ಆನ್ ಲೈನ್ ನಲ್ಲಿ ನಡೆಸಲಾಗುತ್ತದೆ. ಜನರ ಬೇಡಿಕೆಗಳಿಗನುಗುಣವಾಗಿ ಪೊಲೀಸರೇ ವಸ್ತುಗಳನ್ನು ಜನರ ಮನೆಬಾಗಿಲಿಗೆ ತಂದು ಕೊಡಲಿದ್ದಾರೆ. ಸೇವೆಗಳನ್ನು ಪಡೆಯಲು ಜನರಿಗೆ ಇಂದು ಸಂಖ್ಯೆಯೊಂದನ್ನು ನೀಡಲಾಗುತ್ತದೆ. ಅದನ್ನು ಪೊಲೀಸರು ಇಂದು ಸಾಯಂಕಾಲದೊಳಗೆ ತಿಳಿಸಲಿದ್ದಾರೆ. ಔಷಧಿ ಮಳಿಗೆಗಳು, ಆಸ್ಪತ್ರೆಗಳು ಮತ್ತು ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಸ್ಥಳೀಯ ಸಂಪರ್ಕದಿಂದ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ನಿನ್ನೆ ರಾಜ್ಯದಲ್ಲಿ ವರದಿಯಾದ 38 ಪ್ರಕರಣಗಳಲ್ಲಿ 22 ತಿರುವನಂತಪುರದಲ್ಲೇ ಆಗಿವೆ. ಸ್ಥಳೀಯ ಮಟ್ಟದಲ್ಲಿ ವರದಿಯಾದ 22 ಪ್ರಕರಣಗಳಲ್ಲಿ 14 ಪ್ರಕರಣಗಳಲ್ಲಿ ಸೋಂಕು ಎಲ್ಲಿಂದ ತಗುಲಿತು ಎಂದೇ ಪತ್ತೆಯಾಗಿಲ್ಲ.

SCROLL FOR NEXT