ದೇಶ

ಮರ್ಕಜ್ ನಿಜಾಮುದ್ದೀನ್ ಗೆ ತೆರಳಿದ್ದ 122 ಮಲೇಷಿಯನ್ನರಿಗೆ ಜಾಮೀನು!

Srinivas Rao BV

ನವದೆಹಲಿ: ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ಉಲ್ಲಂಘನೆ ಮಾಡಿ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ 122 ಮಲೇಷಿಯನ್ನರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ದೆಹಲಿಯ ಚೀಫ್ ಮೆಟ್ರೋಪಾಲಿಟನ್ ನ್ಯಾಯಾಧೀಶರು ಮಲೇಷಿಯನ್ನರಿಗೆ ಜಾಮೀನು ಮಂಜೂರು ಮಾಡಿದ್ದಾರೆ. 

ಕೇಂದ್ರ ಸರ್ಕಾರದ ಲಾಕ್ ಡೌನ್ ನಿರ್ಬಂಧಗಳ ಹೊರತಾಗಿಯೂ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ಭಾಗವಹಿಸಿ, ಅಕ್ರಮ ಮಿಷನರಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ, ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ಆರೋಪವನ್ನು ಇವರುಗಳ ವಿರುದ್ಧ ಹೊರಿಸಲಾಗಿತ್ತು.

ಈಗ 10,000 ರೂಪಾಯಿ ವೈಯಕ್ತಿಕ ಬಾಂಡ್ ನೀಡಲು ಸೂಚನೆ ನೀಡಿರುವ ದೆಹಲಿ ಕೋರ್ಟ್ 122 ಜನ ವಿದೇಶಿಗರಿಗೆ ಜಾಮೀನು ಮಂಜೂರು ಮಾಡಿದೆ.

ಇದೇ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಶಿಕ್ಷೆಯ ಅವಧಿ ಕಡಿಮೆ ಮಾಡಿಸಬೇಕು ಹಾಗೂ ಈ ಪ್ರಕರಣವನ್ನು ಅತಿ ಶೀಘ್ರವೇ ಇತ್ಯರ್ಥಗೊಳಿಸಬೇಕೆಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿದ್ಧಾರ್ತ್ ಮಾಲಿಕ್ ಗೆ ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ಜು.08 ಕ್ಕೆ ನಿಗದಿಪಡಿಸಲಾಗಿದೆ. ಎಲ್ಲಾ ವಿದೇಶಿ ನಾಗರಿಕರು ಹೊಟೆಲ್ ನಲ್ಲಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರುಪಡಿಸಲಾಗಿತ್ತು.

SCROLL FOR NEXT