ದೇಶ

ಇಡೀ ಜಗತ್ತು ತನ್ನಂತೆ, ಯಾರನ್ನು ಬೇಕಾದರೂ ಹೆದರಿಸಬಹುದು ಎಂದು ನರೇಂದ್ರ ಮೋದಿ ಭಾವಿಸುತ್ತಾರೆ: ರಾಹುಲ್ ಗಾಂಧಿ

Sumana Upadhyaya

ನವದೆಹಲಿ: ಸೋನಿಯಾ ಗಾಂಧಿ ಕುಟುಂಬಕ್ಕೆ ಸೇರಿರುವ ಮೂರು ಟ್ರಸ್ಟ್ ಗಳಲ್ಲಿ ಹಣಕಾಸು ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

ಸತ್ಯಕ್ಕಾಗಿ ಹೋರಾಡುವವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಮತ್ತು ಅವರನ್ನು ಬೆದರಿಸಲು ಸಾಧ್ಯವಿಲ್ಲ.ಭಯಭೀತ ಸರ್ಕಾರದ ಹೇಡಿತನ ಕೃತ್ಯಗಳಿಂದ ಮತ್ತು ಕುರುಡು ಮಾಟಗಾತಿಯ ಬೆದರಿಕೆ ತಂತ್ರಗಳಿಗೆ ಕಾಂಗ್ರೆಸ್ ಬಗ್ಗುವುದಿಲ್ಲ.ತನ್ನ ಕೃತ್ಯಗಳಿಂದ ಆತಂಕಕ್ಕೀಡಾಗಿರುವ ಸರ್ಕಾರ ಈ ರೀತಿಯ ಬೆದರಿಸುವ, ಕುಗ್ಗಿಸುವ ಉಪಾಯ ಮಾಡುತ್ತಿದೆ ಎಂದಿದ್ದಾರೆ.

ಜಗತ್ತು ತನ್ನಂತೆ ಎಂದು ನರೇಂದ್ರ ಮೋದಿ ಭಾವಿಸಿದ್ದಾರೆ. ಪ್ರತಿಯೊಬ್ಬರಿಗೂ ಬೆಲೆ ಕಟ್ಟುತ್ತಾ ಹೋಗಿ ಅವರನ್ನು ಬೆದರಿಸಬಹುದು ಎಂದು ಅಂದುಕೊಂಡಿದ್ದಾರೆ. ಯಾರು ಸತ್ಯಕ್ಕಾಗಿ ಹೋರಾಡುತ್ತಾರೆಯೋ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಮತ್ತು ಅವರನ್ನು ಬೆದರಿಸಲು, ಹೆದರಿಸಲು ಸಾಧ್ಯವಿಲ್ಲ ಎಂದು ಅವರು ಅರ್ಥ ಮಾಡಿಕೊಂಡಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ನಲ್ಲಿ ವಿದೇಶಿ ಹಣ ಕೊಡುಗೆ ಮತ್ತು ಆದಾಯ ತೆರಿಗೆ ಪಾವತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ತನಿಖೆ ನಡೆಸಲು ಆದೇಶಿಸಲಾಗಿದ್ದು ಅಂತರ ಸಚಿವಾಲಯ ಸಮಿತಿ ತನಿಖೆಗೆ ಸಹಕರಿಸಲಿದೆ.

ಭಾರತದ ಭದ್ರತಾ ಹಿತಾಸಕ್ತಿ,ಪ್ರಾದೇಶಿಕ ಸಮಗ್ರತೆ, ಕೋವಿಡ್ -19 ಬಿಕ್ಕಟ್ಟು ನಿರ್ವಹಣೆ, ಸಾಮಾನ್ಯ ಜನರ ಜೀವನ ಮತ್ತು ಜೀವನೋಪಾಯ, ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅವುಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ಎಡವಿದೆ. ಇಂತಹ ಸಮಯದಲ್ಲಿ ಮೋದಿ ಮತ್ತು ಅಮಿತ್ ಶಾ ಹತಾಶೆಯಿಂದ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ಮನಸ್ಥಿತಿ ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

SCROLL FOR NEXT