ದೇಶ

ಸೌರಶಕ್ತಿ ಶುದ್ಧ, ಖಚಿತ, ಸುರಕ್ಷಿತ, ಇಂದು ಮತ್ತು ಮುಂದು ಇಂಧನ ಅಗತ್ಯದ ಮೂಲ: ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ 750 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಯನ್ನು ಮಧ್ಯ ಪ್ರದೇಶದ ರೇವಾದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಮೂರು ಸೌರ ವಿದ್ಯುತ್ ಉತ್ಪಾದನೆ ಘಟಕಗಳನ್ನು ಈ ಯೋಜನೆ ಹೊಂದಿದ್ದು ಪ್ರತಿ ಘಟಕ 250 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಸೌರ ವಿದ್ಯುತ್ ಯೋಜನೆ ಇದಾಗಿದ್ದು ಈ ಘಟಕಗಳು ಸೌರ ಪಾರ್ಕ್ ಒಳಗಡೆ 500 ಹೆಕ್ಟೇರ್ ವಿಸ್ತಾರವಾದ ಪ್ರದೇಶದಲ್ಲಿದೆ.

ಸೌರ ವಿದ್ಯುತ್ ಯೋಜನೆ ಘಟಕಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಪಿಎಂ ಮೋದಿ, ಮಧ್ಯ ಪ್ರದೇಶದ ರೇವಾದಲ್ಲಿ ಸ್ಥಾಪನೆಗೊಂಡಿರುವ ಸೌರ ವಿದ್ಯುತ್ ಘಟಕದಿಂದ ಇಲ್ಲಿನ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆಯಾಗುವುದು ಮಾತ್ರವಲ್ಲದೆ ದೆಹಲಿ ಮೆಟ್ರೊಗೆ ಸಹ ಇದರಿಂದ ಲಾಭವಿದೆ. ರೇವಾದಲ್ಲಿ ಮಾತ್ರವಲ್ಲದೆ ಶಾಜಾಪುರ್, ನೀಮುಚ್ ಮತ್ತು ಛಾತರ್ಪುರ್ ನಲ್ಲಿ ಕೂಡ ಕೆಲಸಗಳು ನಡೆಯುತ್ತಿವೆ ಎಂದರು.

ಇಂದಿಗೆ ಮಾತ್ರವಲ್ಲದೆ ಸೌರ ವಿದ್ಯುತ್ 21ನೇ ಶತಮಾನದ ಇಂಧನ ಶಕ್ತಿಯ ಅಗತ್ಯವಾಗಲಿದೆ. ಯಾಕೆಂದರೆ ಸೌರ ವಿದ್ಯುತ್ ಶುದ್ಧ, ಖಚಿತ ಮತ್ತು ಸುರಕ್ಷಿತ ಇಂಧನ ಮೂಲವಾಗಿದೆ ಎಂದರು.

ನಿಜವಾಗಿಯೂ ರೇವಾ ಇಂದು ಇತಿಹಾಸವನ್ನು ಸೃಷ್ಟಿಸುತ್ತಿದೆ. ಈಗಾಗಲೇ ರೇವಾವನ್ನು ತಾಯಿ ನರ್ಮದಾ ಹೆಸರು ಮತ್ತು ಬಿಳಿ ಹುಲಿಯೊಂದಿಗೆ ಗುರುತಿಸಲಾಗಿದೆ. ಇದೀಗ ಏಷ್ಯಾದ ಅತಿದೊಡ್ಡ ಸೌರಶಕ್ತಿ ಯೋಜನೆಯ ಹೆಸರನ್ನು ಕೂಡ ಸೇರಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಸೇರಿದಂತೆ ಅನೇಕ ಕೇಂದ್ರ ಸಚಿವರು ಉಪಸ್ಥಿತರಿದ್ದರು.

SCROLL FOR NEXT