ದೇಶ

ರಾಜಸ್ಥಾನ ಬಿಕ್ಕಟ್ಟು: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಬಿಟಿಪಿ ಷರತ್ತುಬದ್ಧ ಬೆಂಬಲ

Nagaraja AB

ಜೈಪುರ:ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಒಂದು ವೇಳೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆದರೆ ಭಾರತೀಯ ಟ್ರೈಬಲ್  ಪಾರ್ಟಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಇದೆ.ಇದರಿಂದಾಗಿ ಸಚಿನ್ ಪೈಲಟ್ ಎಪಿಸೋಡ್ ನಿಂದ ಉಸಿರು ಕಟ್ಟಿದ್ದಂತಾಗಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದೆ.

200 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಟಿಪಿಯ ಇಬ್ಬರು ಶಾಸಕರಿದ್ದಾರೆ. ಗೆಹ್ಲೋಟ್ ಗೆ ತಮ್ಮ ಪಕ್ಷ ಷರತ್ತು ಬದ್ಧ ಬೆಂಬಲ ನೀಡಲಿದೆ ಎಂದು ಬಿಟಿಪಿಯ ರಾಷ್ಟ್ರೀಯ ಉಪಾಧ್ಯಕ್ಷ ಪರೇಶ್ ವಾಸವಾ ವಾಗ್ದಾನಾ ಮಾಡಿದ್ದಾರೆ.

ವಿಷಯಾಧಾರಿತವಾಗಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಪಕ್ಷ ಬೆಂಬಲಿಸಲಿದೆ. ಒಂದು ವೇಳೆ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಿದರೆ ವಿಶ್ವಾಸಮತ ಯಾಚನೆ ವೇಳೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಾಗುವುದು ಎಂದು ಬಿಟಿಪಿ ರಾಜಸ್ಥಾನದ ಮುಖ್ಯಸ್ಥ ವೆಲಾರಾಮ್ ಗೊಗ್ರಾ ತಿಳಿಸಿದ್ದಾರೆ. ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಜೈಪುರದ ಹೊಟೋಲ್ ವೊಂದರಲ್ಲಿ ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಟಿಪಿಯ ಇಬ್ಬರು ಶಾಸಕರು ಕೂಡಾ ಪಾಲ್ಗೊಂಡಿದ್ದರು. ನಂತರ  ಸೂಕ್ತ ಸಂದರ್ಭದಲ್ಲಿ ಬೆಂಬಲ ನೀಡುವುದಾಗಿ ಬಿಟಿಪಿ ಶಾಸಕ ರಾಜ್ ಕುಮಾರ್ ರೊಹಟ್ ಹೇಳುವ ವಿಡಿಯೋ ಸಚಿನ್ ಪೈಲಟ್ ಅಧಿಕೃತ ವಾಟ್ಸಾಪ್  ಗ್ರೂಫ್ ನಿಂದ ಹಂಚಿಕೆಯಾಗಿತ್ತು.

ಬಹುಮತಕ್ಕೆ 101 ಶಾಸಕರ ಅಗತ್ಯವಿದ್ದು, ತಮ್ಮಗೆ 109 ಶಾಸಕರ ಬೆಂಬಲ ಇರುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಬಿಜೆಪಿ 72, ಸಚಿನ್ ಪೈಲಟ್ ಬಣದಲ್ಲಿ ಮೂವರು ಪಕ್ಷೇತರರು ಸೇರಿದಂತೆ 22 ಶಾಸಕರು ಇದ್ದಾರೆ.

SCROLL FOR NEXT