ದೇಶ

ರಾಜಸ್ಥಾನ ಬಿಕ್ಕಟ್ಟು: ಕಾಂಗ್ರೆಸ್ ಶಾಸಕರಿಂದ ಧರಣಿ, ಸಿಆರ್ ಪಿಎಫ್ ನಿಯೋಜಿಸುವಂತೆ ಬಿಜೆಪಿ ಒತ್ತಾಯ

Lingaraj Badiger

ಜೈಪುರ: ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿತ ಶಾಸಕರು, ರಾಜ್ಯಪಾಲರು ಕೂಡಲೇ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿ ಶುಕ್ರವಾರ ರಾಜಭವನದಲ್ಲಿಯೇ ಧರಣಿ ಆರಂಭಿಸಿದ್ದಾರೆ. 

ಕಾಂಗ್ರೆಸ್ ಶಾಸಕರು ರಾಜಭವನದಲ್ಲಿ ಧರಣಿ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ಬಿಜೆಪಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಕೂಡಲೇ ಸಿಆರ್ ಪಿಎಫ್ ಪಡೆಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದೆ.

ಜನ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹೀಗಾಗಿ ನಾವು ರಾಜಸ್ಥಾನ ಪೊಲೀಸರನ್ನು ನಂಬಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಿಆರ್ ಪಿಎಫ್ ನಿಯೋಜಿಸಬೇಕು ಎಂದು ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರು ಹೇಳಿದ್ದಾರೆ.

ಅಶೋಕ್ ಗೆಹ್ಲೋಟ್ ಅವರು ಇಂದು ತಮ್ಮ ಬೆಂಬಲಿಗ ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಕಲರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಸೋಮವಾರದಿಂದ ರಾಜ್ಯ ವಿಧಾನಸಭೆ ಅಧಿವೇಶನ ಕರೆಯುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ರಾಜ್ಯಪಾಲರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಜ್ಯಪಾಲರ ಭೇಟಿ ಬಳಿಕ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಈಗ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಶಾಸಕರು ರಾಜಭವನದಲ್ಲಿಯೇ ಧರಣಿ ಆರಂಭಿಸಿದ್ದು, ರಾಜ್ಯಪಾಲರು ವಿಧಾನಸಭೆ ಅಧಿವೇಶನ ಕರೆಯುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

SCROLL FOR NEXT