ದೇಶ

ಅನ್ ಲಾಕ್ 3: ಆ. 5ರಿಂದ ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ, ರಾತ್ರಿ ಕರ್ಫ್ಯೂ ತೆರವು

Lingaraj Badiger

ನವದೆಹಲಿ: ಕೇಂದ್ರ ಸರ್ಕಾರ ಬುಧವಾರ ಅನ್ ಲಾಕ್-3 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಕಂಟೈನ್​ಮೆಂಟ್​ ಜೋನ್​ಗಳನ್ನು ಹೊರತುಪಡಿಸಿ, ಉಳಿದ ಪ್ರದೇಶಗಳಲ್ಲಿ ಆಗಸ್ಟ್ 5ರಿಂದ ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಅಲ್ಲದೆ ರಾತ್ರಿ ಕರ್ಫ್ಯೂ ಅನ್ನು ಸಹ ತೆರವುಗೊಳಿಸಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡಿರುವ ಕೇಂದ್ರ ಸರ್ಕಾರ, ಮೆಟ್ರೋ, ಶಾಲಾ, ಕಾಲೇಜ್ ಗಳು, ಕೋಚಿಂಗ್ ಸೆಂಟರ್ ಗಳು ಮತ್ತು ಚಿತ್ರ ಮಂದಿರಗಳ ಮೇಲಿನ ನಿರ್ಬಂಧವನ್ನು ಆಗಸ್ಟ್ 31ರ ವರೆಗೆ ಮುಂದುವರೆಸಿದೆ.

ಥಿಯೇಟರ್ ತೆರೆಯಲು ಶಿಫಾರಸು ಮಾಡಿದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಲಹೆಯನ್ನು ಗೃಹ ಇಲಾಖೆ ಪರಿಗಣಿಸಿಲ್ಲ. ಮೂರನೇ ಹಂತದ ಅನ್​ಲಾಕ್​ನಲ್ಲೂ ಥಿಯೇಟರ್​ ಲಾಕ್​ಡೌನ್ ಮುಂದುವರೆಯಲಿದೆ. 

ಕಂಟೈನ್ ಮೆಂಟ್ ಝೋನ್ ನಲ್ಲಿ ಆಗಸ್ಟ್  31 ರವರೆಗೂ ಕಠಿಣ ಲಾಕ್ ಡೌನ್ ಮುಂದುವರಿಯಲಿದ್ದು, 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕೆಳಗಿನ ಮಕ್ಕಳು ಮನೆಯಲ್ಲಿ ಇರಬೇಕು. ತೀರಾ ಅಗತ್ಯ ಕೆಲಸಗಳಿಗೆ ಮಾತ್ರ ಹೊರಗೆ ಹೋಗಬೇಕು. ಹಾಗೇ, ವಂದೇ ಭಾರತ್ ಮಿಷನ್ ಅಡಿ ಸೀಮಿತ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುವುದು. ವಂದೇ ಭಾರತ ಮಿಷನ್ ಹೊರತಾದ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

SCROLL FOR NEXT