ದೇಶ

ಭಾರತ-ಚೀನಾ ಸಂಘರ್ಷ: ಹಿಂದೂ ಮಹಾಸಾಗರದಲ್ಲಿ ಹೆಚ್ಚುವರಿ ಯುದ್ಧನೌಕೆ, ಜಲಾಂತರ್ಗಾಮಿ ನೌಕೆ ನಿಯೋಜನೆ!

Vishwanath S

ನವದೆಹಲಿ: ಪೂರ್ವ ಲಡಾಖ್ ನಲ್ಲಿ ಉಪಟಳ ನೀಡುತ್ತಿರುವ ಚೀನಾಕ್ಕೆ ಸ್ಪಷ್ಟ ಸಂದೇಶ ಕಳುಹಿಸಲುಭಾರತೀಯ ನೌಕಾಪಡೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ(ಐಒಆರ್) ಹೆಚ್ಚಿನ ಸಂಖ್ಯೆಯ ಮುಂಚೂಣಿ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಿದೆ ಎಂದು ಉನ್ನತ ರಕ್ಷಣಾ ಮೂಲಗಳು ಬುಧವಾರ ತಿಳಿಸಿವೆ.

ಜೂನ್ 15ರಂದು ಗಲ್ವಾನ್ ಕಣಿವೆ ಘರ್ಷಣೆಯ ನಂತರ ಉಭಯ ದೇಶಗಳ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ತನ್ನ ಮುಂಚೂಣಿಯ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಐಒಆರ್‌ನಲ್ಲಿ ನಿಯೋಜಿಸಿದೆ. 

ಮಿಲಿಟರಿ, ಭಾರತೀಯ ವಾಯುಪಡೆ (ಐಎಎಫ್) ಮತ್ತು ನೌಕಾಪಡೆಗಳನ್ನು ಗಡಿ ಉದ್ಧಕ್ಕೂ ನಿಯೋಜಿಸಲಾಗಿದೆ. ಇದರ ಜೊತೆಗೆ ಚೀನಾಕ್ಕೆ ದೃಢವಾದ ಮತ್ತು ಸ್ಪಷ್ಟವಾದ ಸಂದೇಶವನ್ನು ರವಾನಿಸಲು ರಾಜತಾಂತ್ರಿಕತೆ ಮತ್ತು ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. 

ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಮನ್ವಯದ ವಿಧಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತದ ಸ್ಪಷ್ಟ ಸಂದೇಶದ ಬಗ್ಗೆ ಚೀನಾವನ್ನು ಅರ್ಥಮಾಡಿಸಲು ಮೂವರು ಸೇವಾ ಮುಖ್ಯಸ್ಥರು ನಿಯಮಿತವಾಗಿ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದರು.

ಭಾರತದ ನಿಯೋಜನೆಗೆ ಚೀನಾ ಸ್ಪಂದಿಸುತ್ತದೆಯೇ ಎಂದು ಕೇಳಿದಾಗ, ಹಿಂದೂ ಮಹಾಸಾಗರದಲ್ಲಿ ಚೀನಾದ ಹಡಗುಗಳು ಸಾಗುವಿಕೆಯಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಪ್ರದೇಶದಲ್ಲಿ ಬೀಜಿಂಗ್‌ನ ವಿಸ್ತಾರವಾದ ಪ್ರಾದೇಶಿಕ ಹಕ್ಕುಗಳಿಗೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಿಎಲ್‌ಎ ನೌಕಾಪಡೆಯು ದಕ್ಷಿಣ ಚೀನಾ ಸಮುದ್ರದಲ್ಲಿ ಸಂಪನ್ಮೂಲಗಳನ್ನು ಅತಿಯಾಗಿ ನಿಯೋಜಿಸುವುದೇ ಕಾರಣ ಎಂದು ಅವರು ಹೇಳಿದರು.

SCROLL FOR NEXT