ದೇಶ

ಜಮ್ಮು-ಕಾಶ್ಮೀರ: ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜ್ಜದ್ ಲೋನ್ ಗೃಹ ಬಂಧನದಿಂದ ಬಿಡುಗಡೆ!

Srinivasamurthy VN

ಶ್ರೀನಗರ: ಮಾಜಿ ಪ್ರತ್ಯೇಕತಾವಾದಿ ಮತ್ತು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಸಜ್ಜಾದ್ ಲೋನ್ ಕೊನೆಗೂ ಗೃಹ ಬಂಧನದಿಂದ ಬಿಡುಗಡೆಯಾಗಿದ್ದಾರೆ.

ಶುಕ್ರವಾರ ಸ್ಥಳೀಯ ಜಿಲ್ಲಾಡಳಿತ ಈ ಬಗ್ಗೆ ತಮಗೆ ಮಾಹಿತಿ ನೀಡಿತು ಎಂದು ಸ್ವತಃ ಸಜ್ಜದ್ ಘನಿ ಲೋನ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಜ್ಜದ್ ಲೋನ್, ನನ್ನ ಗೃಹ ಬಂಧನಕ್ಕೆ ಒಂದು ವರ್ಷ ತುಂಬಲು 5 ದಿನ ಗಳು ಬಾಕಿ ಇರುವಂತೆ ನನ್ನ ಬಿಡುಗಡೆ ಆದೇಶ ಬಂದಿದೆ. ನಾನು ಅಂತಿಮವಾಗಿ ಈಗ ಸ್ವತಂತ್ರ ಹಕ್ಕಿಯಾಗಿದ್ದೇನೆ ಎಂದು ಹೇಳಿದ್ದಾರೆ.

'ಗೃಹ ಬಂಧನದಲ್ಲಿದ್ದಾಗ ನನಗೆ ಹೊರ ಜಗತ್ತಿನ ಪರಿಚಯವಿರಲಿಲ್ಲ. ಆದರೆ ಖಂಡಿತಾ ಸಾಕಷ್ಟು ಬದಲಾಗಿದೆ. ನನಗೆ ಜೈಲು ಹೊಸದೇನು ಅಲ್ಲ, ಅಲ್ಲಿ ದೈಹಿಕವಾಗಿ ದಾಳಿ ಮಾಡಲಾಗುತ್ತಿತ್ತು. ಆದರೆ ಗೃಹ ಬಂಧನ  ಸಂಪೂರ್ಣವಾಗಿ ಮಾನಸಿಕ ದಾಳಿಯಾಗಿದೆ. ಮಾನಸಿಕವಾಗಿ ನಮ್ಮನ್ನು ಸಾಕಷ್ಟು ಕುಗ್ಗಿಸಿದೆ. ನಿಮ್ಮೊಂದಿಗೆ ನಾನು ತುಂಬಾ ಹೇಳಿಕೊಳ್ಳುವುದಿದೆ. ಶೀಘ್ರದಲ್ಲೇ ಅವೆಲ್ಲವನ್ನೂ ಹೇಳಿಕೊಳ್ಳುತ್ತೇನೆ ಎಂದು ಲೋನ್ ಟ್ವೀಟ್ ಮಾಡಿದ್ದಾರೆ.

ಇದೇ ಸಜ್ಜದ್ ಲೋನ್ ಅವರು ಈ ಹಿಂದೆ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರವಿದ್ದ ಸಂದರ್ಭದಲ್ಲಿ ಸಚಿವರಾಗಿದ್ದರು. ಈ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ವಿಧಿ 370 ರದ್ಧತಿ ಬಳಿಕ ಅಲ್ಲಿನ ರಾಜಕೀಯ ನಾಯಕರನ್ನು ಕೇಂದ್ರ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರು ಗೃಹ ಬಂಧನಲ್ಲಿಟ್ಟಿದ್ದರು. ಲೋನ್ ಅವರ ಚರ್ಚ್ ಲೇನ್ ನಲ್ಲಿರುವ ಅಧಿಕೃತ ನಿವಾಸದಲ್ಲಿ ಅವರನ್ನು ಗೃಹ ಬಂಧನಕ್ಕೀಡು ಮಾಡಲಾಗಿತ್ತು. 

ಕೆಲವೇ ದಿನಗಳ ಹಿಂದಷ್ಟೇ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಅವರನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ಮಾಜಿ ಪ್ರತ್ಯೇಕತಾವಾದಿ ಮತ್ತು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಸಜ್ಜದ್ ಲೋನ್ ರನ್ನು ಕೂಡ ಗೃಹ ಬಂಧನದಿಂದ ಮುಕ್ತ ಮಾಡಿದೆ.

SCROLL FOR NEXT