ದೇಶ

ಲೆಫ್ಟಿನೆಂಟ್ ಗವರ್ನರ್ ಆದೇಶದಿಂದ ದೆಹಲಿಗರಿಗೆ ದೊಡ್ಡ ಸಮಸ್ಯೆ: ಸಿಎಂ ಅರವಿಂದ್ ಕೇಜ್ರಿವಾಲ್ ಅಸಮಾಧಾನ

Srinivasamurthy VN

ನವದೆಹಲಿ: ದೆಹಲಿಯಲ್ಲಿ ದೆಹಲಿ ನಿವಾಸಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಬೇಕು ಎಂಬ ಕಾರಣದಿಂದ ಆಸ್ಪತ್ರೆಗಳನ್ನು ಮೀಸಲಿಡುವ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿರುವ ದೆಹಲಿ ಲೆಫ್ಚಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿರ್ಧಾರದಿಂದ ದೆಹಲಿ ನಿವಾಸಿಗಳಿಗೆ ದೊಡ್ಡ ಪ್ರಮಾಣದ ತೊಂದರೆಯಾಗಲಿದೆ ಎಂದು ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅತ್ತ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಆದೇಶ ಹೊರ ಬೀಳುತ್ತಿದ್ದಂತೆಯೇ ಇತ್ತ ಟ್ವಿಟರ್ ನಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅರವಿಂದ್ ಕೇಜ್ರಿವಾಲ್ ಅವರು, ಅನಿಲ್ ಬೈಜಾಲ್ ಅವರ ಆದೇಶದಿಂದ ದೆಹಲಿಯಲ್ಲಿ ದೊಡ್ಡ ಮಟ್ಟದ ಸಮಸ್ಯೆ ಉಲ್ಬಣಗೊಳ್ಳಲಿದೆ. ದೆಹಲಿಯಲ್ಲಿ ದೆಹಲಿ ನಿವಾಸಿಗಳೇ ಚಿಕಿತ್ಸೆಗೆ ಪರದಾಡಬೇಕಾಗುತ್ತದೆ. ದೇಶದ ಎಲ್ಲ ನಾಗರಿಕರಿಗೂ ದೆಹಲಿಯಲ್ಲಿ ಚಿಕಿತ್ಸೆ ನೀಡುವುದು ದೊಡ್ಡ ಸಮಸ್ಯೆ ತಂದೊಡ್ಡುತ್ತದೆ.  ಬಹುಶಃ ದೇಶದ ಎಲ್ಲ ಭಾಗದ ನಿವಾಸಿಗಳಿಗೂ ಸೇವೆ ಸಲ್ಲಿಸಬೇಕು ಎಂಬುದು ಭಗವಂತನ ನಿರ್ಣಯವಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಕೆಲವೇ ಗಂಟೆಗಳ ಮುನ್ನ  ದೆಹಲಿಯಲ್ಲಿ ದೆಹಲಿ ನಿವಾಸಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಬೇಕು ಎಂಬ ಕಾರಣದಿಂದ ಆಸ್ಪತ್ರೆಗಳನ್ನು ಮೀಸಲಿಡುವ ಕೇಜ್ರಿವಾಲ್ ಸರ್ಕಾರದ ನಿರ್ಧಾರಕ್ಕೆ ಲೆಫ್ಟಿನೆಂಟ್ ಗವರ್ನರ್  ತಡೆ ನೀಡಿದ್ದು, ದೆಹಲಿಯಲ್ಲಿ ಪ್ರತೀಯೊಬ್ಬರಿಗೂ ಚಿಕಿತ್ಸೆ ದೊರೆಯಬೇಕು ಎಂದು ಹೇಳಿದ್ದರು. ಅಲ್ಲದೆ ಈ ಸಂಬಂಧ ದೆಹಲಿ ಸರ್ಕಾರದ ಆದೇಶಕ್ಕೆ ತಡೆ ನೀಡಿದ್ದರು. 

ಮಾರಕ ಕೊರೋನಾ ವೈರಸ್ ದೆಹಲಿಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಗಳ ವ್ಯಾಪಕ ಕೊರತೆ ಎದುರಾಗಿತ್ತಿದೆ. ಇದೇ ಕಾರಣಕ್ಕೆ ಈ ಹಿಂದೆ ದೆಹಲಿ ಸರ್ಕಾರ ಅಲ್ಪ ಪ್ರಮಾಣದ ಸೋಂಕು ಮತ್ತು ಕೊರೋನಾ ಲಕ್ಷಣ ರಹಿತ ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಹೋಮ್ ಕ್ವಾರಂಟೈನ್ ನಲ್ಲಿರಿಸಿ ಚಿಕಿತ್ಸೆ ಪಡೆಯುವಂತೆ ಸೂಚಿಸಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೇಜ್ರಿವಾಲ್ ಸರ್ಕಾರ ದೆಹಲಿ ನಿವಾಸಿಗಳಿಗೆಂದೇ ಆಸ್ಪತ್ರೆಗಳನ್ನು ಮೀಸಲಿಟ್ಟಿದ್ದು, ಇತರ ರಾಜ್ಯಗಳ ರೋಗಿಗಳನ್ನು ನಿರ್ಬಂಧಿಸುವ ಕಾರ್ಯಕ್ಕೆ ಮುಂದಾಗಿತ್ತು.

SCROLL FOR NEXT