ನವದೆಹಲಿ: ದೇಶದ ರಾಜಕೀಯ ಭೂಪಟವನ್ನು ಬದಲಾಯಿಸುವ ಲಿಪುಲೇಖ್, ಕಾಲಪಾಣಿ ಮತ್ತು ಲಿಂಪಿಯಾಧುರ ಪ್ರದೇಶಗಳು ತನಗೆ ಸೇರಿದ್ದು ಎಂದು ತೋರಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಬಗ್ಗೆ ನೇಪಾಳ ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆ, ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ.
ನಿನ್ನೆ ಕಠ್ಮಂಡುವಿನಲ್ಲಿ ವಿದೇಶಿ ಸುದ್ದಿಸಂಸ್ಥೆಗೆ ಹೇಳಿಕೆ ನೀಡಿರುವ ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗ್ವಾವಾಲಿ, ಗಡಿ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಸುವ ಬಗ್ಗೆ ಭಾರತದ ಕಡೆಯಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ನಾವು ಕಾದು ನೋಡುತ್ತಿದ್ದೇವೆ. ಔಪಚಾರಿಕ ಒಪ್ಪಂದವನ್ನು ನಾವು ಭಾರತದ ಜೊತೆಗೆ ಬಯಸುತ್ತಿದ್ದು ಇದರಿಂದ ಈ 21ನೇ ಶತಮಾನದಲ್ಲಿ ಇನ್ನಷ್ಟು ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಿಕೊಂಡು ವಿಶೇಷ ಸಹಭಾಗಿತ್ವವನ್ನು ಹೊಂದಬಹುದು ಎಂದು ನಾವು ಭಾವಿಸಿದ್ದೇವೆ ಎಂದಿದ್ದಾರೆ.
ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ನೇಪಾಳದ ಈ ರಾಜಕೀಯ ನಿರ್ಧಾರದ ಬಗ್ಗೆ ಯಾರನ್ನೂ ಇದುವರೆಗೆ ಸಂಪರ್ಕಿಸಿಲ್ಲ. ನೇಪಾಳದೊಂದಿಗೆ ಮಾತುಕತೆ ನಡೆಸಬೇಕಾದರೆ ಸಕಾರಾತ್ಮಕ ಉತ್ತಮ ವಾತಾವರಣ ನಿರ್ಮಾಣವಾಗಬೇಕೆಂದು ಈ ಹಿಂದೆ ಭಾರತ ಹೇಳಿತ್ತು.
ನೇಪಾಳ ಕಮ್ಯೂನಿಸ್ಟ್ ಪಾರ್ಟಿ(ಎನ್ ಸಿಪಿ) ನೇತೃತ್ವದ ಆಡಳಿತಾರೂಢ ಸರ್ಕಾರ ನೇಪಾಳ ಸಂಸತ್ತಿನ ಉಭಯ ಸದನಗಳಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು. ವಿರೋಧ ಪಕ್ಷ ನೇಪಾಳ ಕಾಂಗ್ರೆಸ್ ತಿದ್ದುಪಡಿಯನ್ನು ವಿರೋಧಿಸಿತ್ತು. ಸಂಸತ್ತಿನ ಸದಸ್ಯರಿಗೆ ಈ ಬಗ್ಗೆ ಪ್ರತಿಕ್ರಿಯಿಸಲು 72 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು ನಂತರ ಮಸೂದೆ ಅನುಮೋದನೆಯಾಗುತ್ತದೆ.