ದೇಶ

ರಾಜಸ್ತಾನ ಸರ್ಕಾರ ಉರುಳಿಸಲು ಬಿಜೆಪಿ ಯತ್ನ? ಕಾಂಗ್ರೆಸ್ ಶಾಸಕರು ರೆಸಾರ್ಟ್ ಗೆ, ಎಸಿಬಿಗೆ ಪತ್ರ ಬರೆದ ಮುಖ್ಯ ಸಚೇತಕ

Sumana Upadhyaya

ಜೈಪುರ: ಮಧ್ಯಪ್ರದೇಶದ ನಂತರ ರಾಜಸ್ತಾನ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಬೆಳವಣಿಗೆಗಳ ನಂತರ ನಿನ್ನೆ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಜೈಪುರದ ಹೊರವಲಯದ ಐಷಾರಾಮಿ ರೆಸಾರ್ಟ್ ವೊಂದಕ್ಕೆ ಕರೆಸಿಕೊಂಡು ಸಭೆ ನಡೆಸಿದ್ದರು. ರಾಜ್ಯದ ಮೂರು ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ನಡೆಯುತ್ತಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಈ ಬೆಳವಣಿಗೆಗಳು ನಡೆದಿವೆ.

ಜೈಪುರದಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಮತ್ತು ಸ್ವತಂತ್ರ ಶಾಸಕರ ಸಭೆಗೆ ರಾಷ್ಟ್ರೀಯ ವಕ್ತಾರ ರಂದೀಪ್ ಸುರ್ಜೆವಾಲಾ ಆಗಮಿಸಿದ್ದರು. ಸಾರ್ವಜನಿಕ ಜನಾದೇಶವನ್ನು ಹರಣ ಮಾಡುವುದು ಬಿಜೆಪಿಯ ಸ್ವಭಾವವಾಗಿದೆ ಎಂದು ಆರೋಪಿಸಿದರು.

ರಾಜಸ್ತಾನದಲ್ಲಿ ಬಿಜೆಪಿಯ ಕುತಂತ್ರ ನಡೆಯುವುದಿಲ್ಲ. ರಾಜಸ್ತಾನದ ಜನತೆ ಬೆದರಿಕೆಗಳಿಗೆ ಬಗ್ಗುವುದಿಲ್ಲ. ನಮ್ಮ ಶಾಸಕರು ಯಾವುದೇ ಆಮಿಷ, ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದಿದ್ದಾರೆ.

ರಾಜಸ್ತಾನದಲ್ಲಿ ತಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದು ಸಾರ್ವಜನಿಕ ಜನಾದೇಶ ಮತ್ತು ಪ್ರಜಾಪ್ರಭುತ್ವವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸುರ್ಜೆವಾಲಾ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಾಜಸ್ತಾನದ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ, ರಾಜಸ್ತಾನದಲ್ಲಿ ಕಾಂಗ್ರೆಸ್ ಅಸುರಕ್ಷತೆಯ ಭಾವದಿಂದ ಭೀತಿಗೊಳಗಾಗಿದೆ. ಅವರ ಸ್ವಂತ ಪಕ್ಷದಲ್ಲಿಯೇ ಶಿಸ್ತು, ವ್ಯವಸ್ಥೆಯಿಲ್ಲ. ಅವರ ಶಾಸಕರ ಮೇಲೆ ಅವರಿಗೇ ನಂಬಿಕೆಯಿಲ್ಲ ಎಂದು ಟೀಕಿಸಿದರು.

ನಿನ್ನೆ ರಾಜಸ್ತಾನ ಸರ್ಕಾರದ ಮುಖ್ಯ ಸಚೇತಕ ಮಹೇಶ್ ಜೋಶಿ, ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದ್ದರು.

SCROLL FOR NEXT