ದೇಶ

ಆಶ್ರಯ ಮನೆಗಳ ಮಕ್ಕಳನ್ನು ಕೊರೋನಾದಿಂದ ಹೇಗೆ ಕಾಪಾಡುತ್ತೀರಿ?: ರಾಜ್ಯ ಸರ್ಕಾರಗಳಿಂದ ವರದಿ ಕೇಳಿದ 'ಸುಪ್ರೀಂ'

Sumana Upadhyaya

ನವದೆಹಲಿ: ತಮಿಳು ನಾಡಿನಲ್ಲಿ ಸರ್ಕಾರದಡಿಯಲ್ಲಿರುವ ನಿರಾಶ್ರಿತ ಕೇಂದ್ರಗಳಲ್ಲಿ 35 ಮಕ್ಕಳಲ್ಲಿ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾದ ಬಳಿಕ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರದ ಬಳಿ ಉಳಿದ ಮಕ್ಕಳ ಸ್ಥಿತಿ ವರದಿಯನ್ನು ಕೇಳಿ ಅವರ ರಕ್ಷಣೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸಹ ಕೇಳಿದೆ.

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್, ಕೃಷ್ಣ ಮುರಳಿ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ ಇದೇ ಸಂದರ್ಭದಲ್ಲಿ ವಿವಿಧ ರಾಜ್ಯ ಸರ್ಕಾರಗಳು ನಿರಾಶ್ರಿತ ಕೇಂದ್ರಗಳಲ್ಲಿರುವ ಮಕ್ಕಳ ಸುರಕ್ಷತೆಗೆ ಕೋವಿಡ್-19ನಿಂದ ಕಾಪಾಡಲು ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ವಿವರಿಸುವಂತೆ ವರದಿಯನ್ನು ಕೇಳಿ ತಾನು ಕಳೆದ ಏಪ್ರಿಲ್ 3ರಂದು ಹೊರಡಿಸಿದ್ದ ಆದೇಶವನ್ನು ಪಾಲಿಸುವಂತೆ ಕೂಡ ಹೇಳಿದೆ.

ರಾಜ್ಯಗಳಲ್ಲಿನ ಹೈಕೋರ್ಟ್ ಗಳಲ್ಲಿರುವ ಬಾಲಾಪರಾಧ ನ್ಯಾಯ ಸಮಿತಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪ್ರಶ್ನೆಗಳನ್ನು ಕಳುಹಿಸಿ ನಿರಾಶ್ರಿತ ಕೇಂದ್ರಗಳಲ್ಲಿ ಮಕ್ಕಳನ್ನು ಕೊರೋನಾದಿಂದ ರಕ್ಷಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ.

ತಮಿಳು ನಾಡಿನ ರೊಯಪುರಂ ಎಂಬಲ್ಲಿ ಸರ್ಕಾರದ ನಿರಾಶ್ರಿತ ಕೇಂದ್ರಗಳಲ್ಲಿರುವ 35ಕ್ಕೂ ಅಧಿಕ ಮಕ್ಕಳು ಮತ್ತು ಐವರು ಸಿಬ್ಬಂದಿಗೆ ಕೊರೋನಾ ಸೋಂಕು ತಗಲಿತ್ತು.

ದೇಶಾದ್ಯಂತ ಬಾಲಾಪರಾಧ ಕೇಂದ್ರಗಳಲ್ಲಿ ಮತ್ತು ಇತರ ನಿರಾಶ್ರಿತ ಕೇಂದ್ರಗಳು, ಆಶ್ರಮಗಳಲ್ಲಿರುವ ಮಕ್ಕಳನ್ನು ಕೊರೋನಾದಿಂದ ರಕ್ಷಿಸಲು ಸ್ವಯಂಪ್ರೇರಿತ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್ 3ರಂದು ಅವರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿತ್ತು.

SCROLL FOR NEXT