ದೇಶ

ಕೃತಕ ಗಡಿ ವಿಸ್ತರಣೆ ಒಪ್ಪಲಾಗದು: ನೇಪಾಳದ ನೂತನ ನಕ್ಷೆಗೆ ಭಾರತ ತಿರುಗೇಟು

Lingaraj Badiger

ನವದೆಹಲಿ: ಮೂರು ಭಾರತೀಯ ಭೂ ಪ್ರದೇಶಗಳಾದ ಲಿಂಪಿಯಧುರ, ಲಿಪುಲೇಖ್ ಹಾಗೂ ಕಾಲಾಪಾನಿ ಒಳಗೊಂಡ ಪರಿಷ್ಕೃತ ರಾಜಕೀಯ ಭೂಪಟಕ್ಕೆ ಅವಕಾಶ ಕಲ್ಪಿಸುವ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ನೇಪಾಳಕ್ಕೆ ಭಾರತ ತೀಕ್ಷಣವಾಗಿಯೇ ಪ್ರತಿಕ್ರಿಯಿಸಿದ್ದು, ಕೃತಕ ಗಡಿ ವಿಸ್ತರಣೆ ಸಮರ್ಥನೀಯವಲ್ಲ ಮತ್ತು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಶನಿವಾರ ಹೇಳಿದೆ.

'ನೇಪಾಳದ ಪ್ರತಿನಿಧಿಗಳ ಸದನವು ಭಾರತದ ಭೂಪ್ರದೇಶದ ಭಾಗಗಳನ್ನು ಸೇರಿಸಲು ನೇಪಾಳದ ನಕ್ಷೆಯನ್ನು ಬದಲಾಯಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಈ ವಿಷಯದಲ್ಲಿ ನಾವು ಈಗಾಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ" ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು ಹೇಳಿದ್ದಾರೆ.

ಈ ಕೃತಕ ಗಡಿ ವಿಸ್ತರಣೆ ಐತಿಹಾಸಿಕ ಸಂಗತಿ ಅಥವಾ ಪುರಾವೆಗಳನ್ನು ಆಧರಿಸಿಲ್ಲ ಮತ್ತು ಇದು ಸಮರ್ಥನೀಯವಲ್ಲ. ಗಡಿ ವಿಷಯಗಳ ಕುರಿತು ಮಾತುಕತೆ ನಡೆಸುವ ನಮ್ಮ ಪ್ರಸ್ತುತ ತಿಳುವಳಿಕೆಯ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದ ಗಡಿಯಲ್ಲಿರುವ ಲಿಪುಲೆಖ್, ಕಲಾಪಣಿ ಮತ್ತು ಲಿಂಪಿಯಾಧುರಾದ ಆಯಕಟ್ಟಿನ ಪ್ರಮುಖ ಪ್ರದೇಶಗಳ ಮೇಲೆ ನೇಪಾಳ ತನ್ನ ನೂತನ ನಕ್ಷೆ ತಿದ್ದುಪಡಿ ಮೂಲಕ ಹಕ್ಕು ಸ್ವಾಮ್ಯ ಸಾಧಿಸಲು ಯತ್ನಿಸುತ್ತಿದೆ.

SCROLL FOR NEXT