ದೇಶ

ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಪಪ್ಪು ಯಾದವ್ ಒತ್ತಾಯ

Nagaraja AB

ಮುಂಬೈ: ನಿನ್ನೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಇಲ್ಲಿನ ಡಾ. ಆರ್ ಎನ್ ಕೂಪರ್ ಮುನ್ಸಿಪಲ್ ಜನರಲ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಆದರೆ, ವರದಿ ಇನ್ನೂ ಬಂದಿಲ್ಲ. 

ಈ ಮಧ್ಯೆ   ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಜನ್ ಅಧಿಕಾರ್ ಪಕ್ಷದ ಮುಖ್ಯಸ್ಥ ಪಪ್ಪು ಯಾದವ್ ಒತ್ತಾಯಿಸಿದ್ದಾರೆ. ಸಾವಿನ ಹಿಂದೆ ದೊಡ್ಡ ಪಿತೂರಿ ನಡೆದಿದೆ ಅನ್ನಿಸುತ್ತಿದೆ. ಇದು ಹೇಗೆ ನಡೆದಿದೆ ಎಂಬುದನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸರ್ಕಾರದ ಬಳಿ ಮನವಿ ಮಾಡಿಕೊಳ್ಳುವುದಾಗಿ ಅವರು ಸುದ್ದಿಗಾರರಿಗೆ  ಹೇಳಿದ್ದಾರೆ.

ಸುಶಾಂತ್ ಸಿಂಗ್ ಒಳ್ಳೇಯ ವ್ಯಕ್ತಿಯಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿ ಆಗಿರಲಿಲ್ಲ. ತಳಮಟ್ಟದಿಂದ ಮೇಲೆದ್ದು, ಬಿಹಾರಕ್ಕೆ ಹೆಮ್ಮೆ ತಂದಿದ್ದಾರೆ. ಇದೀಗ ಅವರ ನಿಧನದ ಹಿನ್ನೆಲೆಯಲ್ಲಿ ಇಡೀ ಬಿಹಾರ ರಾಜ್ಯ ದು:ಖದಲ್ಲಿದೆ ಎಂದು ತಿಳಿಸಿದ ಪಪ್ಪು ಯಾದವ್, ಇದು ನರಹತ್ಯೆಯ ಪ್ರಕರಣವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. 

ಬಾಂದ್ರಾದಲ್ಲಿನ ನಿವಾಸದಲ್ಲಿ ನೇಣುಬಿಗಿದುಕೊಂಡು ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರೂ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. 

SCROLL FOR NEXT