ದೇಶ

ಲಡಾಖ್ ನಲ್ಲಿ ಹುತಾತ್ಮರಾದ ತಮಿಳುನಾಡು ಯೋಧನ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಸಿಎಂ ಪಳನಿಸ್ವಾಮಿ

Lingaraj Badiger

ಚೆನ್ನೈ: ಲಡಾಖ್ ನ ಗಾಲ್ವನ್ ಕಣಿವೆ ಭಾಗದಲ್ಲಿ ನಡೆದ ಭಾರತ - ಚೀನಾ ನಡುವಿನ ಮಲ್ಲಯುದ್ಧದಲ್ಲಿ ಹುತಾತ್ಮರಾದ ತಮಿಳುನಾಡಿನ ಕೆ ಪಳನಿ ಸೇರಿದಂತೆ ಭಾರತೀಯ ಸೇನೆಯ ಮೂವರು ಯೋಧರಿಗೆ ತಮಿಳುನಾಡು ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ದೇಶದ ಸುರಕ್ಷತೆಗಾಗಿ ಪ್ರಾಣ ತ್ಯಾಗ ಮಾಡಿದ ಕಡುಕಲ್ಲೂರ್ ಗ್ರಾಮದ ಪಳನಿ ಹಾಗೂ ಭಾರತೀಯ ಸೇನೆಯ ಇತರ ಇಬ್ಬರು ಹುತಾತ್ಮ ಯೋಧರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪವನ್ನು ಅರ್ಪಿಸುತ್ತೇನೆ ಎಂದು ಸಿಎಂ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ರಾಜ್ಯದ ಹುತಾತ್ಮ ಯೋಧ ಪಳನಿ ಅವರ ಕುಟುಂಬಕ್ಕೆ ತಕ್ಷಣವೇ 20 ಲಕ್ಷ ರೂಪಾಯಿ ಪರಿಹಾರ ಮತ್ತು ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ಯೋಧ ಪಳನಿ ಅವರ ಕುಟುಂಬವನ್ನು ಖುದ್ದಾಗಿ ಭೇಟಿಯಾಗಿ ಸಮಾಧಾನಪಡಿಸುವಂತೆ ಸಿಎಂ ಪಳನಿಸ್ವಾಮಿ ಅವರು ರಾಮನಾಥಪುರಂ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಅಲ್ಲದೆ ಅಗಲಿದ ಯೋಧನಿಗೆ ರಾಜ್ಯ ಸರ್ಕಾರದ ಪರವಾಗಿ ಗೌರವ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದಾರೆ.

SCROLL FOR NEXT