ದೇಶ

ಗಾಲ್ವಾನ್ ಸಂಘರ್ಷ ಹಿನ್ನಲೆ: 33 ರಷ್ಯಾ ಯುದ್ಧವಿಮಾನಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದ ವಾಯುಸೇನೆ!

Srinivasamurthy VN

ನವದೆಹಲಿ: ಲಡಾಖ್ ನ ಗಾಲ್ವಾನ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷದ ಹಿನ್ನಲೆಯಲ್ಲಿ ಗಡಿಯಲ್ಲಿ ಪರಿಸ್ಥಿತಿ ಗಂಭೀರವಾಗಿರುವಂತೆಯೇ ಇತ್ತ ಭಾರತೀಯ ವಾಯುಸೇನೆ ರಷ್ಯಾದ 33 ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವಿನ ಸಂಘರ್ಷ ವಿಚಾರದ ಬೆನ್ನಲ್ಲೇ ಇತ್ತ ಭಾರತೀಯ ವಾಯುಸೇನೆ 33 ಹೊಸ ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಈ ಪೈಕಿ ರಷ್ಯಾ ನಿರ್ಮಿತ 21 ಮಿಗ್-29 ಯುದ್ಧ ವಿಮಾನಗಳು, 12 ಸುಖೋಯ್ ಎಂಕೆಐ ಫೈಟರ್ ಜೆಟ್ ಗಳು ಸೇರಿವೆ.

ಈ ಹಿಂದೆಯೇ ವಾಯುಸೇನೆ ಈ ಬಗ್ಗೆ ಚರ್ಚೆ ನಡೆಸಿತ್ತಾದರೂ ಗಾಲ್ವಾನ್ ಸಂಘರ್ಷದ ಬಳಿಕ 6 ಸಾವಿರ ಕೋಟಿ ಮೌಲ್ಯದ 33 ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆಗೆ ವೇಗ ನೀಡಿದೆ. ಮುಂದಿನವಾರಾಂತ್ಯದೊಳಗೆ ಕೇಂದ್ರ ಸರ್ಕಾರ ಈ ಬಗ್ಗೆ ತನ್ನ ನಿಲುವು ಪ್ರಕಟಿಸಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 

ದೇಶದ ವಿವಿಧ ಜಿಲ್ಲೆಗಳಲ್ಲಿ ನಡೆದ ಯುದ್ಧ ವಿಮಾನ ಅಪಘಾತಗಳಲ್ಲಿ ಪತನಕ್ಕೀಡಾಗಿ ನಾಶವಾದ ಯುದ್ಧ ವಿಮಾನಗಳ ಬದಲಿಗೆ ಈ ಯುದ್ಧ ವಿಮಾನಗಳ ಖರೀದಿಗೆ ವಾಯುಸೇನೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ. ಕಳೆದ 10 ರಿಂದ 15 ವರ್ಷಗಳ ಅವಧಿಯಲ್ಲಿ ಭಾರತ ಸುಮಾರು 272 ಸುಖೋಯ್ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಮಾಡಿಕೊಂಡಿದೆ. 

ಚೀನಾಗೆ ಹೋಲಿಕೆ ಮಾಡಿದರೆ ಭಾರತದ ಬಳಿ ಇರುವ ಯುದ್ದ ವಿಮಾನಗಳ ಸಂಖ್ಯೆ ತೀರಾ ಕಡಿಮೆ. ಆದರೂ ಚೀನಾಗೆ ಠಕ್ಕರ್ ನೀಡಲು ನಮ್ಮಲ್ಲಿ ಸಾಮರ್ಥ್ಯವಿದೆ. ಆದರೂ ಭಾರತದ ಸೇನಾಸಾಮರ್ಥ್ಯ ವೃದ್ದಿಗಾಗಿ ಯುದ್ಧ ವಿಮಾನಗಳ ಖರೀದಿ ಅನಿವಾರ್ಯ ಎಂದು ಸೇನೆ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. 

ರಷ್ಯಾ ನಿರ್ಮಿತ ಮಿಗ್ 2 ಯುದ್ಧ ವಿಮಾನಗಳು ದೀರ್ಘಕಾಲದ ಕಾರ್ಯಾಚರಣೆಗೆ ಸೂಕ್ತವಾಗಿದ್ದು, ಅಲ್ಲದೆ ಬಲಿಷ್ಛ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಕಾಲಕಾಲಕ್ಕೆ ಯುದ್ಧವಿಮಾನಗ ತಂತ್ರಜ್ಞಾನದ ನವೀಕರಣ ಕೂಡ ನಡೆಯುತ್ತಿದೆ. ಇದೇ ಕಾರಣಕ್ಕೆ ಭಾರತೀಯ ವಾಯುಸೇನೆ ಮಿಗ್ ಸರಣಿಯ ಯುದ್ಧ ವಿಮಾನಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾ ಬಂದಿದೆ. 

SCROLL FOR NEXT