ದೇಶ

ಸಂಸತ್ತಿನ ಮೇಲ್ಮನೆಯಲ್ಲಿ ಇಂದು ಜಿದ್ದಾಜಿದ್ದಿ: 19 ರಾಜ್ಯಸಭಾ ಸ್ಥಾನಗಳಿಗೆ ಮತದಾನ ಪ್ರಗತಿಯಲ್ಲಿ

Sumana Upadhyaya

ನವದೆಹಲಿ: ಸಂಸತ್ತಿನ ಮೇಲ್ಮನೆ, ಗೌರವದ ಸದನವಾಗಿರುವ ರಾಜ್ಯಸಭೆಯ 19 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯುತ್ತಿದೆ. ಇಂದು ಬೆಳಗ್ಗೆ 9 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಮಾರ್ಚ್ ನಲ್ಲಿ ನಡೆಯಬೇಕಾಗಿದ್ದ ಚುನಾವಣೆಯನ್ನು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ರೆಸಾರ್ಟ್ ರಾಜಕೀಯ, ಹಲವು ನಾಯಕರ ರಾಜೀನಾಮೆ, ಪಕ್ಷಾಂತರ, ಲಂಚ ಆರೋಪ ಇವೆಲ್ಲವುಗಳ ಮಧ್ಯೆ 10 ರಾಜ್ಯಗಳ 19 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿರುವುದು ಸಹಜವಾಗಿ ರಾಜಕೀಯ ರಂಗದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟು 24 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಬೇಕಾಗಿತ್ತು. ಆದರೆ ಕೊನೆಯಲ್ಲಿ ಕರ್ನಾಟಕದ ನಾಲ್ಕು ಮಂದಿ ಮತ್ತು ಅರುಣಾಚಲ ಪ್ರದೇಶದ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ ಎಂದು ಘೋಷಿಸಿರುವುದರಿಂದ ಇಂದು 19 ಸ್ಥಾನಗಳಿಗೆ ಮಾತ್ರ ಮತದಾನ ನಡೆಯುತ್ತಿದೆ.

ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಬಿಜೆಪಿ ತನ್ನ ಶಾಸಕರನ್ನು ಖರೀದಿ ಮಾಡಲು ಯತ್ನಿಸುತ್ತಿದೆ ಎಂಬ ಆರೋಪ ಈ ಬಾರಿ ತೀವ್ರವಾಗಿ ಕೇಳಿಬಂದಿದೆ. ಮೂರು ವರ್ಷಗಳ ಹಿಂದೆ ಗುಜರಾತ್ ನಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಅಹ್ಮದ್ ಪಟೇಲ್ ಗೆಲುವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಸಲ ಬಿಜೆಪಿ ಸಣ್ಣ ಅಂತರದಲ್ಲಿ ಸೋಲು ಕಂಡಿತ್ತು. ಇನ್ನು ಮುಂದೆ ಲೋಕಸಭೆಯಲ್ಲಿ ಅಂಗೀಕಾರವಾದ ಮಸೂದೆಗಳು ರಾಜ್ಯಸಭೆಯಲ್ಲಿ ಸುಲಭವಾಗಿ ಒಪ್ಪಿಗೆಯಾಗಲು ಎನ್ ಡಿಎಗೆ ಸುಮಾರು 30 ಹೆಚ್ಚಿನ ಸ್ಥಾನಗಳ ಅವಶ್ಯಕತೆಯಿದೆ.

ಇಂದು ಯಾವ್ಯಾವ ರಾಜ್ಯಗಳ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ?: ಗುಜರಾತ್, ಆಂಧ್ರ ಪ್ರದೇಶಗಳಿಂದ ತಲಾ ನಾಲ್ಕು ಸ್ಥಾನಗಳಿಗೆ, ಮಧ್ಯ ಪ್ರದೇಶ, ರಾಜಸ್ತಾನಗಳಿಂದ ತಲಾ ಮೂರು ಸ್ಥಾನಗಳಿಗೆ, ಜಾರ್ಖಂಡ್ ನಿಂದ ಎರಡು, ಮೇಘಾಲಯ, ಮಣಿಪುರ, ಮತ್ತು ಮಿಜೋರಾಂ ಈಶಾನ್ಯ ರಾಜ್ಯಗಳಲ್ಲಿ ತಲಾ ಒಂದು ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.

ಗುಜರಾತ್, ರಾಜಸ್ತಾನ ಮತ್ತು ಮಧ್ಯ ಪ್ರದೇಶದ ತಲಾ ಒಂದು ಸ್ಥಾನಗಳಿಗೆ ಪೈಪೋಟಿ ತೀವ್ರವಾಗಿದೆ. ಒಟ್ಟು 245 ಸದಸ್ಯ ಸ್ಥಾನಬಲದ ರಾಜ್ಯಸಭೆಯಲ್ಲಿ ಎನ್ ಡಿಎ ಈಗ 91 ಸ್ಥಾನಗಳನ್ನು, ಯುಪಿಎ 61 ಸ್ಥಾನಗಳನ್ನು ಹೊಂದಿದೆ. ಇತರ ವಿರೋಧ ಪಕ್ಷಗಳು ಮತ್ತು ಮೈತ್ರಿ ಮಾಡಿಕೊಳ್ಳದಿರುವ ಪಕ್ಷಗಳೆಲ್ಲಾ ಸೇರಿ 68 ಸ್ಥಾನಗಳನ್ನು ಹೊಂದಿವೆ.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು ಪ್ರತಿ ಶಾಸಕರ ದೇಹದ ತಾಪಮಾನ ತಪಾಸಣೆ ನಡೆಸಿ ಒಳಗೆ ಮತ ಹಾಕಲು ಕಳುಹಿಸಲಾಗುತ್ತದೆ. ಮಾಸ್ಕ್, ಗ್ಲೌಸ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸುರಕ್ಷತೆ ಕೈಗೊಳ್ಳಲಾಗಿದೆ. ಜ್ವರ ಇತ್ಯಾದಿ ಲಕ್ಷಣಗಳಿರುವ ಶಾಸಕರನ್ನು ಪ್ರತ್ಯೇಕ ಕೊಠಡಿಯಲ್ಲಿ ಮತ ಹಾಕುವ ವ್ಯವಸ್ಥೆ ಮಾಡಲಾಗುತ್ತದೆ.

ಇಂದು ಸಂಜೆ 5 ಗಂಟೆ ನಂತರ ಫಲಿತಾಂಶ ಹೊರಬೀಳಲಿದೆ.

ಇಂದಿನ ರಾಜ್ಯಸಭಾ ಚುನಾವಣೆಯ ನೋಟ ಹೇಗಿದೆ?: ಚುನಾವಣಾ ಆಯೋಗ ನಿಗದಿಪಡಿಸಿದ ದಿನಾಂಕ ಪ್ರಕಾರ ಕಳೆದ ಮಾರ್ಚ್ 26ರಂದು ರಾಜ್ಯಸಭೆಯ 56 ನಗಳಿಗೆ ಚುನಾವಣೆ ನಡೆಯಬೇಕಾಗಿತ್ತು. ಆದರೆ ಮತದಾನಕ್ಕೆ ಮೊದಲೇ 37 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಇಂದು 19 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಕರ್ನಾಟಕದ ನಾಲ್ಕು ಸ್ಥಾನಗಳಿಗೆ, ಅರುಣಾಚಲ ಪ್ರದೇಶ, ಮಿಜೋರಂನ ತಲಾ ಒಂದು ಸ್ಥಾನಗಳಿಗೆ ನಂತರ ಚುನಾವಣೆಯನ್ನು ಘೋಷಿಸಲಾಯಿತು. ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅಭ್ಯರ್ಥಿಗಳಾದ ಈರಣ್ಣ ಕರಡಿ ಮತ್ತು ಅಶೋಕ್ ಗಸ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ನಬಮ್ ರೆಬಿಯಾ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುಜರಾತ್, ಮಧ್ಯ ಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದೆ. ಇಂದಿನ ಸ್ಪರ್ಧೆಯಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ, ದಿಗ್ವಿಜಯ್ ಸಿಂಗ್, ಶಿಬು ಸೊರೋನ್ ರಂಥ ಘಟಾನುಘಟಿ ನಾಯಕರಿದ್ದಾರೆ.

SCROLL FOR NEXT