ದೇಶ

1971 ಯುದ್ಧದ ಹೀರೋ ಸ್ಕ್ವಾಡ್ರನ್ ಲೀಡರ್ ಪರ್ವೇಜ್ ಜಮಾಸ್ಜಿ ನಿಧನ

Srinivasamurthy VN

ನವದೆಹಲಿ: 1971 ಯುದ್ಧದ ಹೀರೋ ಸ್ಕ್ವಾಡ್ರನ್ ಲೀಡರ್ ಪರ್ವೇಜ್ ಜಮಾಸ್ಜಿ ಅವರು ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ಇಬ್ಬರು ಪುತ್ರರು ಮತ್ತು ಓರ್ವ ಮಗನನ್ನು ಅಗಲಿದ್ದಾರೆ.

1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಸಂದರ್ಭದಲ್ಲಿ ನಡೆದಿದ್ದ ಯುದ್ಧದಲ್ಲಿ ಭಾರತೀಯ ಸೇನೆ ಮೇಲುಗೈ ಸಾಧಿಸುವುದರಲ್ಲಿ ಪರ್ವೇಜ್ ಜಮಾಸ್ಜಿ ಅವರ ಪಾತ್ರ ಪ್ರಮುಖವಾಗಿತ್ತು. ಅದೇ ಯುದ್ಧದಲ್ಲಿ ಅವರ ಕಾಲಿಗೆ ಗುಂಡೇಟು ಕೂಡ ತಗುಲಿತ್ತು. ಆದರೂ ದೃತಿಗೆಡದೇ ಪರ್ವೇಜ್ ಜಮಾಸ್ಜಿ ಹೋರಾಡಿದ್ದರು.

ಅಂತೆಯೇ ಪರ್ವೇಜ್ ಜಮಾಸ್ಜಿ ಭಾರತದ ಅತ್ಯಂತ ಹಿರಿಯ ಯುದ್ಧ ಹೆಲಿಕಾಪ್ಟರ್ ಪೈಲಟ್ ಎಂಬ ಕೀರ್ತಿಗೂ ಭಾಜನರಾಗಿದ್ದರು. ಆಗಿನ ಕಾಲಕ್ಕೆ ಅತ್ಯಂತ ಕಿರಿಯ ವಿಂಗ್ ಕಮಾಂಡರ್ ಎನಿಸಿಕೊಂಡಿದ್ದ ಪರ್ವೇಜ್ ಜಮಾಸ್ಜಿ ಶತೃಪಾಳಯದ ಗಡಿಗೆ ಭಾರತದ ನೂರಾರು ಸೈನಿಕರನ್ನು ರಷ್ಯಾ ನಿರ್ಮಿತ ಎಂಐ-4 ಹೆಲಿಕಾಪ್ಟರ್ ನಲ್ಲಿ ಸುರಕ್ಷಿತವಾಗಿ ರವಾನೆ ಮಾಡಿದ್ದರು. ಪರ್ವೇಜ್ ಜಮಾಸ್ಜಿಮಿಜೋರಾಂ ಗಡಿಯಲ್ಲಿನ ದಿಮಾಗಿರಿ ಮತ್ತು ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ)ದಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದರು.

ಪರ್ವೇಜ್ ಜಮಾಸ್ಜಿ ಅವರು ತಮ್ಮ ಸಾಹಸ ಮತ್ತು ಕರ್ತವ್ಯ ದಕ್ಷತೆಯಿಂದಾಗಿ ವೀರ ಚಕ್ರ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ಗೌರವ ಪುರಸ್ಕಾರ ಪಡೆದಿದ್ದರು. ಇನ್ನು ಪರ್ವೇಜ್ ಜಮಾಸ್ಜಿ ಅವರ ಅಂತ್ಯಕ್ರಿಯೆಯನ್ನು ಮುಂಬೈನ ಟವರ್ ಆಫ್ ಸೈಲೆನ್ಸ್ ನಲ್ಲಿ ನೆರವೇರಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

SCROLL FOR NEXT