ದೇಶ

ಪುಲ್ವಾಮಾ ಎನ್‍ ಕೌಂಟರ್: ಮೂವರು ಉಗ್ರರು ಹತ

Lingaraj Badiger

ಶ್ರೀನಗರ: ದಕ್ಷಿಣ ಕಾಶ್ಮೀರ ಜಿಲ್ಲೆಯ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಗುರುವಾರ ಸಂಜೆ ಆರಂಭಿಸಿದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.

ಏತನ್ಮಧ್ಯೆ, ಭದ್ರತಾ ಕಾರಣಕ್ಕಾಗಿ ಈ ಪ್ರದೇಶದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಕಳೆದ ರಾತ್ರಿಯಿಂದ ಸ್ಥಗಿತಗೊಳಿಸಲಾಗಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ನಿರ್ದಿಷ್ಟ ಪ್ರದೇಶದತ್ತ ಸಾಗುತ್ತಿರುವಾಗ, ಅಲ್ಲಿ ಅಡಗಿದ್ದ ಉಗ್ರರು ಗುಂಡು ಹಾರಿಸಿದರು. ಪ್ರತಿಯಾಗಿ "ಭದ್ರತಾ ಪಡೆಗಳು ಪ್ರತೀಕಾರ ತೀರಿಸಿಕೊಂಡವು. ಜಮ್ಮು ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್ ಮತ್ತು ರಾಷ್ಟ್ರೀಯ ರೈಫಲ್ಸ್ ನ ವಿಶೇಷ ಕಾರ್ಯಪಡೆಯ ಯೋಧರು ಜಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ. 

ಸುಮಾರು ಹತ್ತು ನಿಮಿಷಗಳ ಗುಂಡಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಹತ್ತಿರದ ಮನೆಗಳಲ್ಲಿನ ಎಲ್ಲಾ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. 

ರಾತ್ರಿಯೂ ಗುಂಡಿನ ಚಕಮಕಿ ನಡೆದು, ಬೆಳಗಿನ ಜಾವದ ವೇಳೆಗೆ ಓರ್ವ ಉಗ್ರ ಹತನಾದರೆ, ಇನ್ನಿಬ್ಬರು ಉಗ್ರರು ಬೆಳಗ್ಗೆ ಹತರಾಗಿದ್ದಾರೆ. ಎನ್ ಕೌಂಟರ್ ನಡೆದ ಸ್ಥಳದಿಂದ ಎರಡು ಎಕೆ -47 ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅವರು ಹೇಳಿದ್ದಾರೆ. 

ಏತನ್ಮಧ್ಯೆ, ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ತಡೆಗಟ್ಟಲು ಹೆಚ್ಚುವರಿ ಭದ್ರತಾ ಪಡೆಗಳು ಮತ್ತು ಪೊಲೀಸರನ್ನು ಸಮೀಪದ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ವದಂತಿಗಳನ್ನು ತಡೆಗಟ್ಟಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸೇರಿದಂತೆ ಎಲ್ಲಾ ಸೆಲ್ಯುಲಾರ್ ಕಂಪನಿಗಳ ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.

SCROLL FOR NEXT