ದೇಶ

ನಿರ್ಭಯಾ: 'ಬೆಂಕಿಯೊಂದಿಗೆ ಸರಸ ಬೇಡ'; ಅಪರಾಧಿಗಳ ಪರ ವಕೀಲರಿಗೆ ದೆಹಲಿ ಕೋರ್ಟ್ ಛಾಟಿ

Srinivasamurthy VN

ನವದೆಹಲಿ: ಪದೇ ಪದೇ ಒಂದಿಲ್ಲೊಂದು ಅರ್ಜಿಗಳ ಸಲ್ಲಿಸುವ ಮೂಲಕ ನೀವು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನೇ ಉಲ್ಲಂಘನೆ ಮಾಡುತ್ತಿದ್ದೀರಿ.. ಬೆಂಕಿಯೊಂದಿಗೆ ಸರಸ ಬೇಡ ಎಂದು ದೆಹಲಿ ಕೋರ್ಟ್ ನಿರ್ಭಯಾ ಅತ್ಯಾಚಾರಿಗಳ ಪರ ವಕೀಲರಿಗೆ ಛಾಟಿ ಬೀಸಿದೆ.

ನಿರ್ಭಯಾ ಪ್ರಕರಣದ ಅಪರಾಧಿ ಪವನ್ ಗುಪ್ತಾ ಸಲ್ಲಿಕೆ ಮಾಡಿದ್ದ ಕ್ಯುರೇಟಿವ್ ಅರ್ಜಿಯ ವಿಚಾರಣೆ ನಡೆಸಿದ ದೆಹಲಿಯ ಪಾಟಿಯಾಲಾ ಹೌಸ್ ನ ಸೆಷನ್ಸ್ ನ್ಯಾಯಾಲಯ ಕ್ಯುರೇಟಿವ್ ಅರ್ಜಿಯ ವಜಾಗೊಳಿಸಿತು. ಅಲ್ಲದೆ ಅಪರಾಧಿಗಳ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ' ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ. ಈ ಬಗ್ಗೆ ನೀವು ಅತ್ಯಂತ ಜಾಗರೂಕರಾಗಿರಬೇಕು. ನಿಮ್ಮ ಒಂದೇ ಒಂದು ತಪ್ಪು ನಡೆ ದೊಡ್ಡ ಅನಾಹುತವನ್ನೇ ಸೃಷ್ಟಿಸಬಹುದು ಎಂದು ಎಚ್ಚರಿಕೆ ನೀಡಿತು.

ಅಲ್ಲದೆ ಪದೇ ಪದೇ ಒಂದಿಲ್ಲೊಂದು ಅರ್ಜಿಗಳ ಸಲ್ಲಿಸುವ ಮೂಲಕ ನೀವು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನೇ ಉಲ್ಲಂಘನೆ ಮಾಡುತ್ತಿದ್ದೀರಿ.. ಈ ಬಗ್ಗೆ ನಿಮಗೆ ಎಚ್ಚರವಿರಲಿ ಎಂದು ಆರೋಪಿಗಳ ಪರ ವಕೀಲ ಎಪಿ ಸಿಂಗ್ ಅವರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿತು.

ಇದಕ್ಕೂ ಮೊದಲು ತಮ್ಮ ವಾದ ಮಂಡಿಸಿದ್ದ ಸಂತ್ರಸ್ಥೆ ನಿರ್ಭಯಾ ಪರ ವಕೀಲರು, ಒಂದಿಲ್ಲೊಂದು ಅರ್ಜಿಗಳ ಮೂಲಕ ಅವರು ಕೋರ್ಟ್ ನ ಅಮೂಲ್ಯವಾದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಆದರೆ ನ್ಯಾಯಾಲಯ ಇದಕ್ಕೆ ಬ್ರೇಕ್ ಹಾಕಿದ್ದು ನಾಳೆಯೇ ಎಲ್ಲ ಅಪರಾಧಿಗಳನ್ನು ಗಲ್ಲಿಗೇರಿಸಲಾಗುತ್ತದೆ. ನ್ಯಾಯಾಲಯದ ಆದೇಶದಿಂದ ನನಗೆ ನಿಜಕ್ಕೂ ತೃಪ್ಕಿಯಿದೆ. ಕಾನೂನನ್ನು ಅವರು ಹೇಗೆಲ್ಲಾ ತಿರುಚಲು ಯತ್ನಿಸಿದರೂ ಅದು ಸಫಲವಾಗಿಲ್ಲ ಎಂದು ಹೇಳಿದರು.

ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ್ದ ಸುಪ್ರೀಂ
ಇನ್ನು ಅಪರಾಧಿ ಪವನ್ ಗುಪ್ತ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಬೆಳಗ್ಗೆ ವಜಾಗೊಳಿಸಿತ್ತು.   ಈ ಹಿಂದೆ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲಿ ಲೋಪದೋಷಗಳಿವೆ.   ಹೀಗಾಗಿ ಮರಣದಂಡನೆಯನ್ನು ಜೀವಾವಧಿಗೆ ಬದಲಿಸುವಂತೆ ಕೋರಿ ಪವನ್ ಗುಪ್ತ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.   ಸೋಮವಾರ ಬೆಳಗ್ಗೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ, ಕ್ಯುರೇಟಿವ್ ಅರ್ಜಿಯ ಜತೆಗೆ, ಮರಣದಂಡನೆಯನ್ನು ಮುಂದೂಡಬೇಕೆಂಬ ಮನವಿಯನ್ನೂ ಸಹ ತಿರಸ್ಕರಿಸಿದೆ.

SCROLL FOR NEXT