ನವದೆಹಲಿ: ಭಾರತದಲ್ಲಿ ಒಟ್ಟು 28 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಎಲ್ಲಾ ಅಂತರಾಷ್ಟ್ರೀಯ ವಿಮಾನಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಬುಧವಾರ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, 12 ದೇಶಗಳಿಂದ ಬರುವ ಎಲ್ಲಾ ವಿಮಾನಗಳನ್ನು ಪ್ರಸ್ತುತ ಸಾರ್ವತ್ರಿಕವಾಗಿ ತಪಾಸಣೆ ನಡೆಸುತ್ತಿದ್ದೇವೆ. ಆದರೆ, ಇದೀಗ ಎಲ್ಲಾ ಅಂತರಾಷ್ಟ್ರೀಯ ವಿಮಾನಗಳಿಂದ ಬರುವ ಎಲ್ಲಾ ಪ್ರಯಾಣಿಕರನ್ನು ಸಾರ್ವತ್ರಿಕ ತಪಾಸಣೆ ನಡೆಸಲಿದ್ದೇವೆಂದು ಹೇಳಿದ್ದಾರೆ.
ವಿದೇಶದಿಂದ ಬರುವ ಪ್ರತೀಯೊಬ್ಬರೂ ತಪಾಸಣೆಗೊಳಗಾಗಲಿದ್ದಾರೆ. ನಿನ್ನೆಯವರೆಗೂ ನಾವು ಒಟ್ಟು 5.89 ಲಕ್ಷ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದೇವೆ. ಪ್ರಮುಖ ಹಾಗೂ ಸಣ್ಣ ಬಂದರುಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮತ್ತು ನೇಪಾಳ ಗಡಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಸುಮಾರು 27 ಸಾವಿರ ಜನರ ಮೇಲೆ ಕಣ್ಗಾವಲಿರಿಸಲಾಗಿದೆ. ದೇಶದಾದ್ಯಂತ ಈ ವರೆಗೂ 28 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 28 ಮಂದಿಯ ಪೈಕಿ ಮೂವರು ಕೇರಳ, ದೆಹಲಿ, ತೆಲಂಗಾಣದಲ್ಲಿ ಒಬ್ಬೊಬ್ಬರು, ಆಗ್ರಾದಲ್ಲಿ 6, ಇಟಲಿಯಿಂದ ಭಾರತ ಪ್ರವಾಸಕ್ಕೆ ಬಂದಿರುವ 17 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.