ದೇಶ

ಕಮಲ್‌ನಾಥ್‌ಗೆ ಮತ್ತೊಂದು ಬಿಗ್ ಶಾಕ್, ರಾಹುಲ್ ಪರಮಾಪ್ತ ಸಿಂಧಿಯಾ ಸೇರಿ 17 ಶಾಸಕರಿಂದ ಕಾಂಗ್ರೆಸ್ ಗೆ ಗುಡ್ ಬೈ, ಉಚ್ಛಾಟನೆ!

Vishwanath S

ಭೂಪಾಲ್: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಬೆನ್ನಲ್ಲೇ ರಾಹುಲ್ ಗಾಂಧಿ ಪರಮಾಪ್ತ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಸೋನಿಯಾ ಗಾಂಧಿ ಅವರಿಗೆ ರಾಜಿನಾಮೆ ಪತ್ರವನ್ನು ರವಾನಿಸಿದ್ದಾರೆ. 

ಸರ್ಕಾರ ಬೀಳುವ ಆತಂಕದಲ್ಲಿದ್ದ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು ಜ್ಯೋತಿರಾಧಿತ್ಯ ಸಿಂಧಿಯಾ ರಾಜಿನಾಮೆ ಕಾಂಗ್ರೆಸ್ ಜಂಘಾಬಲವೆ ಕುಸಿಯುವಂತೆ ಮಾಡಿದೆ. 

ಜ್ಯೋತಿರಾಧಿತ್ಯ ಸಿಂಧಿಯಾ ಸೋನಿಯಾ ಗಾಂಧಿ ಅವರಿಗೆ ರಾಜಿನಾಮೆ ಪತ್ರ ರವಾನಿಸಿದ್ದು ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ನ ಎಲ್ಲಾ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ನಮೂದಿಸಿದ್ದರು.

ಸಿಂಧಿಯಾ ರಾಜಿನಾಮೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಉಳಿದುಕೊಂಡಿರುವ 16 ಕಾಂಗ್ರೆಸ್ ಶಾಸಕರೂ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಇನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ಸಿಂಧಿಯಾ ಸೇರಿ 17 ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಕಳೆದ ಅಪರಾಹ್ನ ಡಸ್ಸೌಲ್ಟ್ ಫಾಲ್ಕನ್ 2000ಎಲ್ಎಕ್ಸ್ ವಿಮಾನ ಬಂದಿಳಿಯುತ್ತಿದ್ದಂತೆ ದೂರದ ಮಧ್ಯ ಪ್ರದೇಶದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ನಡೆದವು. ಈ ವಿಮಾನದಲ್ಲಿ ಕಾಂಗ್ರೆಸ್ ಶಾಸಕರು ಇದ್ದರು. ಅವರೆಲ್ಲರೂ ಪಕ್ಷದ ಬಂಡಾಯ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ಅವರ ನಿಷ್ಠಾವಂತ ಶಾಸಕರಾಗಿದ್ದಾರೆ. 

ಒಟ್ಟು 6 ಸಚಿವರು ಸೇರಿದಂತೆ 17 ಕಾಂಗ್ರೆಸ್ಸಿಗರು ಬೆಂಗಳೂರಿನ ಮಾರೇನಹಳ್ಳಿಯ ಹೋಟೆಲ್ ನಲ್ಲಿ ತಂಗಿದ್ದಾರೆ. ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿರುವ ಅವರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ.

SCROLL FOR NEXT