ದೇಶ

ಗೊಗೊಯಿ ನ್ಯಾಯಾಂಗದ ಸ್ವಾಯತ್ತತೆ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದಾರೆ: ಸುಪ್ರೀಂ ನಿವೃತ್ತ ನ್ಯಾಯಾಧೀಶ ಕುರಿಯನ್

Lingaraj Badiger

ನವದೆಹಲಿ: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ರಾಜ್ಯಸಭಾ ಸದಸ್ಯ ಸ್ಥಾನವನ್ನು ಒಪ್ಪಿಕೊಳ್ಳುವ ಮೂಲಕ ನ್ಯಾಯಾಂಗದ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತತೆಯ ವಿಚಾರದಲ್ಲಿನ ಪ್ರಧಾನ ತತ್ವಗಳೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾದೀಶ ಕುರಿಯನ್ ಜೋಸೆಫ್ ಅವರು ಕಟುವಾಗಿ ಟೀಕಿಸಿದ್ದಾರೆ.

ಈ ಹಿಂದೆ 2018ರ ಜನವರಿ 12ರಂದು ಪ್ರತಿಕಾಗೋಷ್ಠಿ ನಡೆಸಿ ದೇಶದ ನ್ಯಾಯಾಂಗ ವ್ಯವಸ್ಥೆಯೊಳಗಿನ ಹುಳುಕನ್ನು ಬಹಿರಂಗಪಡಿಸಿದ್ದ ನಾಲ್ವರು ನ್ಯಾಯಮೂರ್ತಿಗಳಲ್ಲಿ ರಂಜನ್‌ ಗೊಗೊಯಿ ಅವರೂ ಒಬ್ಬರು. ಆದರೆ ಈಗ ಅವರು ರಾಜ್ಯಸಭಾ ಸದಸ್ಯ ಸ್ಥಾನ ಒಪ್ಪಿಕೊಂಡಿರುವುದು ಆಶ್ಚರ್ಯವಾಗುತ್ತಿದೆ ಎಂದು ಕುರಿಯನ್ ಜೋಸೆಫ್ ಅವರು ಪ್ರತಿಕ್ರಿಯಿಸಿದ್ದಾರೆ.

ನನ್ನ ಪ್ರಕಾರ, ಒಬ್ಬ ನಿವೃತ್ತ ಸಿಜೆಐ ರಾಜ್ಯಸಭಾ ಸ್ಥಾನ ಒಪ್ಪಿಕೊಂಡಿರುವುದು ನ್ಯಾಯಾಂಗದ ಸ್ವಾಯತ್ತತೆ ಬಗ್ಗೆ ಸಾಮಾನ್ಯ ಜನರ ವಿಶ್ವಾಸಕ್ಕೆ ಖಂಡಿತವಾಗಿಯೂ ಧಕ್ಕೆಯಾಗಿದೆ. ಇದು ಭಾರತದ ಸಂವಿಧಾನದ ಮೂಲ ರಚನೆಗಳಲ್ಲಿ ಒಂದಾಗಿದೆ ಎಂದು ಕುರಿಯನ್ ಅವರು ಹೇಳಿದ್ದಾರೆ.

2018ರಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಗೊಗೊಯಿ ಅವರ ಅಂದಿನ ಹೇಳಿಕೆಯನ್ನು ನೆನಪಿಸಿಕೊಂಡ ನಿವೃತ್ತ ನ್ಯಾಯಾಧೀಶ, ಇಂದು ಅವರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನಿನ್ನೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು ವ್ಯಾಪಕವಾಗಿ ಟೀಕಿಸುತ್ತಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಗೊಗೊಯ್ ಅವರು, ನಾನು ಬಹುಶಃ ನಾಳೆ ದೆಹಲಿಗೆ ಹೋಗುತ್ತೇನೆ. ಅಲ್ಲಿ ಮೊದಲು ಪ್ರಮಾಣವಚನ ಸ್ವೀಕರಿಸಿ ನಂತರ ನಾನು ಮಾಧ್ಯಮಗಳ ಜೊತೆ ವಿವರವಾಗಿ ಮಾತನಾಡುತ್ತೇನೆ ಎಂದು ಗುವಾಹಟಿಯಲ್ಲಿ ಹೇಳಿದ್ದಾರೆ.

SCROLL FOR NEXT