ನವದೆಹಲಿ: ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ತನ್ನ ಕಬಂಧ ಬಾಹುಗಳು ಭಾರತದ ಹಲವು ರಾಜ್ಯಗಳಿಗೆ ವಿಸ್ತರಿಸುತ್ತಿದ್ದು, ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ವ್ಯಕ್ತಿಯೋರ್ವರಲ್ಲಿ ವೈರಸ್ ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 138ಕ್ಕೆ ಏರಿಕೆಯಾಗಿದೆ.
ಇಂಗ್ಲೆಂಡ್ ನಿಂದ ಮರಳಿದ 18 ವರ್ಷದ ಯುವಕನಲ್ಲಿ ವೈರಸ್ ಪತ್ತೆಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಇದು ಮೊದಲ ಪ್ರಕರಣವಾಗಿದೆ. ಪ್ರಸ್ತುತ ಯುವಕನ್ನು ಬೆಲಿಯಾಘಾಟಾ ಐಟಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯುವಕನ ರಕ್ತದ ಮಾದರಿ ಹಾಗೂ ಗಂಟಲಿನ ದ್ರವವನ್ನು ಸಂಗ್ರಹಿಸಿದ್ದ ವೈದ್ಯರು ಪರೀಕ್ಷೆ ನಡೆಸಿದ್ದರು. ಈ ವೇಳೆ ವೈರಸ್ ಇರುವುದು ದೃಢಪಟ್ಟಿತ್ತು ಎನ್ನಲಾಗತ್ತಿದೆ.
ಯುವಕನ ತಾಯಿ ಸರ್ಕಾರಿ ಹಿರಿಯ ಅಧಿಕಾರಿಯಾಗಿದ್ದು, ತಂದೆ ಹಾಗೂ ಯುವಕನ ಚಾಲಕನನ್ನೂ ಕೂಡ ಇದೀಗ ಪ್ರತ್ಯೇಕ ಕೊಠಡಿಯಲ್ಲಿಸಲಾಗಿದೆ ಎಂದುಪ ತಿಳಿದುಬಂದಿದೆ.
ಇದೀಗ ಯುವಕನೊಂದಿಗೆ ಸಂಪರ್ಕ ಹೊಂದಿದ್ದ ಪ್ರತೀಯೊಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಎಲ್ಲರನ್ನೂ ಪ್ರತ್ಯೇಕ ಕೊಠಡಿಯಲ್ಲಿರಿಸಲು ಯತ್ನ ನಡೆಸುತ್ತಿದ್ದಾರೆ.
ನಿನ್ನೆಯಷ್ಟೇ ಭಾರತದಲ್ಲಿ ವೈರಸ್'ಗೆ ಮೂರನೇ ವ್ಯಕ್ತಿಯೊಬ್ಬರು ಬಲಿಯಾಗಿದ್ದರು. ಇತ್ತೀಚೆಗೆ ದುಬೈನಿಂದ ಮರಳಿದ್ದ 64 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಅಲ್ಲದೆ. ದೇಶದಾದ್ಯಂತ ಹೊಸದಾಗಿ 18 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಈ ಮೂಲಕ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. ಈ ಪೈಕಿ ಅತೀ ಹೆಚ್ಚು ಪ್ರಕರಣಗಳು ದಾಖಲಾದ ರಾಜ್ಯಗಳೆಂದರೆ, ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕ ಎಂದು ಹೇಳಲಾಗುತ್ತಿದೆ.