ದೇಶ

ಕೊರೋನಾ ಭೀತಿ: ಸೌದಿ ಭೇಟಿ ಬಳಿಕ ಸ್ವಯಂ ಗೃಹ ಬಂಧನ ವಿಧಿಸಿಕೊಂಡ ಬಿಜೆಪಿ ಸಂಸದ ಸುರೇಶ್ ಪ್ರಭು!

Srinivasamurthy VN

ನವದೆಹಲಿ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಹಿನ್ನಲೆಯಲ್ಲಿ ಬಿಜೆಪಿ ಸಂಸದ ಸುರೇಶ್ ಪ್ರಭು ಅವರು ಸ್ವಯಂ ಗೃಹ ಬಂಧನ ವಿಧಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಸೌದಿ ಅರೇಬಿಯಾದಿಂದ ವಾಪಸಾಗಿರುವ ಬಿಜೆಪಿ ಸಂಸದ ಸುರೇಶ್ ಪ್ರಭು ಅವರು ಕೊರೋನಾ ವೈರಸ್ ಸೋಂಕು ಭೀತಿ ಹಿನ್ನಲೆಯಲ್ಲಿ ಸ್ವತಃ ಗೃಹ ಬಂಧನ ವಿಧಿಸಿಕೊಂಡಿದ್ದಾರೆ. ಈ ಕುರಿತಂತೆ ಸುರೇಶ್ ಪ್ರಭು ಅವರೇ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ದುಬೈನಿಂದ ವಾಪಸ್ ಆದ ಬಳಿಕ ನಾನು ಎಲ್ಲ ರೀತಿಯ ವೈದ್ಯಕೀಯ ತಪಾಸಣೆಗೊಳಪಟ್ಟಿದ್ದೇನೆ. ಎಲ್ಲವೂ ನೆಗೆಟಿವ್ ತೋರಿಸುತ್ತಿದೆ. ಇದಾಗ್ಯೂ ಮುಂಜಾಗ್ರತಾ ಕ್ರಮವಾಗಿ ನಾನು ಕೆಲ ದಿನಗಳ ಕಾಲ ಸ್ವಯಂ ಗೃಹ ಬಂಧನದಲ್ಲಿರಬೇಕು ಎಂದು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಎಲ್ಲರೂ ನಿಯಮ ಪಾಲಿಸುವಂತೆ ಮನವಿ ಮಾಡಿದ್ದಾರೆ. ಮುಂದಿನ 14 ದಿನಗಳ ಕಾಲ ಮನೆಯಲ್ಲೇ ಇರುವುದಾಗಿ ತಿಳಿಸಿದ್ದಾರೆ. 

ಕೊರೊನಾ ವೈರಸ್ ಇಡೀ ವಿಶ್ವಾದ್ಯಂತ ಭಯ ಹುಟ್ಟಿಸುತ್ತಿರುವ ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದೇಶದಿಂದ ಬರುವವರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹಾಗೆಯೇ ಸೌದಿಯಿಂದ ಹಿಂದಿರುಗಿರುವ ಬಿಜೆಪಿ ಸಂಸದ ಸುರೇಶ್ ಪ್ರಭುಗೃಹ ದಿಗ್ಬಂಧನದಲ್ಲಿರಲು ನಿರ್ಧರಿಸಿದ್ದಾರೆ. ಸೌದಿಯಲ್ಲಿ ನಡೆದ ಜಿ20 ಶೆರ್ಪಾ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. 

ಮಾಜಿ ವಿತ್ತ ಸಚಿವ ಸುರೇಶ್ ಪ್ರಭು ಅವರನ್ನು ಸೌದಿ ಅರೇಬಿಯಾದಲ್ಲಿ ನಡೆದ ಜಿ20 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಯ್ಕೆ ಮಾಡಿದ್ದರು. ಇದಕ್ಕೂ ಮುನ್ನ ಕೇಂದ್ರ ಸಚಿವ ವಿ ಮುರಳೀಧರನ್ ಕೇರಳದಲ್ಲಿ ಕೊರೋನಾ ರೋಗಿಗಳನ್ನು ಇರಿಸಲಾಗಿದ್ದ ಆಸ್ಪತ್ರೆ ಭೇಟಿ ನೀಡಿದ ಬಳಿಕ ಅವರೂ ಕೂಡ ಗೃಹ ದಿಗ್ಬಂಧನದಲ್ಲಿದ್ದರು. ಬಳಿಕ ವರದಿಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಎಂದು ಬಂದಿತ್ತು. ಚೀನಾದಲ್ಲಿ ಕೊರೋನಾದಿಂದ 7 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 1 ಲಕ್ಷಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

SCROLL FOR NEXT