ದೇಶ

ದೆಹಲಿ ಗಲಭೆಗಳಲ್ಲಿ ಪಾಕಿಸ್ತಾನ ಕೈವಾಡ; ಭದ್ರತಾ ಸಂಸ್ಥೆಗಳ ತನಿಖೆಯಲ್ಲಿ ಬಹಿರಂಗ

Srinivas Rao BV

ನವದೆಹಲಿ: ದೆಹಲಿ ಗಲಭೆಗಳ ಸಂದರ್ಭದಲ್ಲಿ ನೆರೆಯ ಪಾಕಿಸ್ತಾನದಿಂದ 1,000ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಪ್ರಚೋದನಕಾರಿ ಪೋಸ್ಟ್ ಗಳನ್ನು ಮಾಡಲಾಗಿತ್ತು ಎಂಬ ಅಂಶವನ್ನು ಭದ್ರತಾ ಸಂಸ್ಥೆಗಳ ತನಿಖೆಯಲ್ಲಿ   ಬಹಿರಂಗಗೊಂಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್, ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ ನಗರಗಳಿಂದ ಗಲಭೆಗಳನ್ನು ಪ್ರಚೋದಿಸುವಂತಹ ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ. 

ದ್ವೇಷ ಪೂರಿತ ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನು ದೆಹಲಿ ಗಲಭೆಗಳು 2020, ದೆಹಲಿ ಬರ್ನಿಂಗ್,  ಶೇಮ್ ಆನ್ ಡೆಲ್ಲಿ ಪೊಲೀಸ್, ದೆಹಲಿ ಪೊಲೀಸ್ ಟ್ರೋತ್,  ದೆಹಲಿ ಪೊಲೀಸ್ ಮರ್ಡರರ್ಸ್ ಹ್ಯಾಷ್ ಟ್ಯಾಗ್ ಮೂಲಕ ಫೆಬ್ರವರಿ 25 ರಿಂದ ಮಾರ್ಚ್ 3ರವರೆಗೂ ಪಾಕಿಸ್ತಾನ ನಗರಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದುಬಂದಿವೆ ಎಂದು  ಭದ್ರತಾ ಸಂಸ್ಥೆಗಳು ತಿಳಿಸಿವೆ.

ಗಲಭೆಯ ಸಂದರ್ಭದಲ್ಲಿ ಪೋಸ್ಟ್ ಮಾಡಿದ 70 ಪಾಕಿಸ್ತಾನದ  ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತೀಯ ಭದ್ರತಾ ಪಡೆಗಳು ಗುರುತಿಸಿವೆ. ದೆಹಲಿ ಗಲಭೆಯ ಸಂದರ್ಭದಲ್ಲಿ ಮಾಡಿದ ಕೆಲವು ಟ್ವೀಟ್ ಗಳನ್ನು ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯಿಂದ  ಪೋಸ್ಟ್  ಮಾಡಲಾಗಿದೆ  ಎಂಬುದು  ಭದ್ರತಾ ಸಂಸ್ಥೆಗಳ  ತನಿಖೆ ಬಹಿರಂಗಗೊಂಡಿದೆ. 

ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 53 ಜನರು ಸಾವನ್ನಪ್ಪಿ, 2೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.  ದೆಹಲಿ  ಹಿಂಸಾಚಾರದಲ್ಲಿ ಪಾಕಿಸ್ತಾನ ಭಾಗಿಯಾಗಿರುವ ವಿಷಯದ ಬಗ್ಗೆ ಭದ್ರತಾ ಸಂಸ್ಥೆಗಳು  ತನಿಖೆ ನಡೆಸುತ್ತಿವೆ.

SCROLL FOR NEXT