ದೇಶ

'ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡುವುದಾದರೆ ಮುಂದಿನ ವಾರದೊಳಗೆ ತಿಳಿಸಬೇಕು': ಕೇಂದ್ರಕ್ಕೆ ಸುಪ್ರೀಂ ತಾಕೀತು 

Sumana Upadhyaya

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಗೃಹ ಬಂಧನದಲ್ಲಿಟ್ಟಿರುವ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡಲಾಗುತ್ತದೆಯೇ, ಇಲ್ಲವೇ ಎಂದು ಮುಂದಿನ ವಾರದೊಳಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಆಡಳಿತಕ್ಕೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ ಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲರಿಗೆ ಒಮರ್ ಅಬ್ದುಲ್ಲಾ ಅವರನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡದಿದ್ದರೆ ಅವರ ಗೃಹ ಬಂಧನ ಪ್ರಶ್ನಿಸಿ ಅವರ ಸೋದರಿ ಸಾರಾ ಅಬ್ದುಲ್ಲಾ ಪೈಲಟ್ ಸಲ್ಲಿಸಿದ ಮನವಿಯನ್ನು ಆದ್ಯತೆ ಮೇರೆಗೆ ಆಲಿಸಲಾಗುವುದು ಎಂದಿದೆ. ನೀವು ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡುವುದಾದರೆ ತಕ್ಷಣ ಬಿಡುಗಡೆ ಮಾಡಿ, ಇಲ್ಲದಿದ್ದರೆ ಆದ್ಯತೆ ಮೇರೆಗೆ ಅವರ ಸೋದರಿಯ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ ಎಂದಿದೆ ನ್ಯಾಯಪೀಠ.

ಈ ಕೇಸಿನಲ್ಲಿ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತೊಂದು ಕೋರ್ಟ್ ನಲ್ಲಿ ವಿಚಾರಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದಿದ್ದಕ್ಕೆ ನ್ಯಾಯಮೂರ್ತಿಗಳು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಒಮರ್ ಅಬ್ದುಲ್ಲಾ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ಅಡ್ವೊಕೇಟ್ ಕಪಿಲ್ ಸಿಬಲ್, ಸದ್ಯದಲ್ಲಿಯೇ ವಿಚಾರಣೆಗೆ ಕೋರ್ಟ್ ದಿನಾಂಕ ನಿಗದಿಪಡಿಸಬೇಕು ಎಂದರು.

ಸದ್ಯ ಕೊರೋನಾ ವೈರಸ್ ಹಾವಳಿಯಿಂದಾಗಿ ಸುಪ್ರೀಂ ಕೋರ್ಟ್ ನಲ್ಲಿ ಆರು ಪೀಠಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ವಿಚಾರಣೆ ಯಾವಾಗ ಎಂದು ಹೇಳಲು ಸಾಧ್ಯವಿಲ್ಲ. ಬಹುಶಃ ಮುಂದಿನ ವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಬಹುದು ಎಂದು ನ್ಯಾಯಪೀಠ ಹೇಳಿತು.

SCROLL FOR NEXT