ದೇಶ

ಹಿಂದೂ ಮಹಾಸಾಗರ ಪ್ರದೇಶದಲ್ಲಿ ನೀರೊಳಗಿನ ಡ್ರೋನ್ ನಿಯೋಜಿಸಿದ ಚೀನಾ, ಸಮುದ್ರ ಗಣಿಗಾರಿಕೆ ಮೇಲೆ ಕಣ್ಣು! 

Srinivas Rao BV

ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ನೀರೊಳಗೆ ಸಂಚರಿಸುವ 12 ಡ್ರೋನ್ ಗಳನ್ನು ನಿಯೋಜಿಸಿದ್ದು ಸಮುದ್ರದ ಆಳದಲ್ಲಿ ಸಮೀಕ್ಷೆ ನಡೆಸಲು ಪ್ರಾರಂಭಿಸಿದೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಫೋರ್ಬ್ಸ್ ನ ವರದಿಯ ಆಧಾರದಲ್ಲಿ ಪ್ರಕಟಿಸಿರುವ ಲೇಖನದ ಮೂಲಕ ಈ ಮಾಹಿತಿ ಬಹಿರಂಗವಾಗಿದ್ದು, ಭಾರತವೂ ಚೀನಾದ ಈ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. 

ಚೀನಾ ನೀರೊಳಗೆ ಡ್ರೋಣ್ ಗಳನ್ನು ನಿಯೋಜನೆ ಮಾಡಿ ಸಮೀಕ್ಷೆ ನಡೆಸುತ್ತಿದೆ ಎಂದು ಮೇಲ್ನೋಟಕ್ಕೆ ತೋರಿದರೂ ಕಡಲ ಆಳದಲ್ಲಿ ಜಲಾಂತರ್ಗಾಮಿ ಹಾಗೂ ಜಲಾಂತರ್ಗಾಮಿ ನಿರೋಧಕ ಯುದ್ಧ ಕಾರ್ಯಾಚರಣೆ ದೃಷ್ಟಿಯಿಂದ ಚೀನಾ ನಡೆ ಅನುಮಾನ, ಆತಂಕಗಳಿಗೆ ಕಾರಣವಾಗಿದೆ. 

ಡಿಸೆಂಬರ್ ನ ಮಧ್ಯದಿಂದಲೇ ಚೀನಾ ಹಿಂದೂ ಮಹಾಸಾಗರದಲ್ಲಿ ’ಸೀ ವಿಂಗ್’ ಡ್ರೋಣ್ ಗಳನ್ನು ನಿಯೋಜಿಸಿತ್ತು. ಈ ಡ್ರೋಣ್ ಗಳು ಹಲವು ತಿಂಗಳುಗಳ ಕಾಲ ಕಾರ್ಯನಿರ್ವಹಿಸಿ ಈ ವರೆಗೂ 3,400 ವೀಕ್ಷಣೆಗಳನ್ನು ಮಾಡಿದೆ ಎಂದು ಚೀನಾದ ನೈಸರ್ಗಿಕ ಸಂಪನ್ಮೂಲಗಳ ಇಲಾಖೆ ಹೇಳಿರುವುದನ್ನು ಫೋರ್ಬ್ಸ್ ವರದಿ ಮಾಡಿದೆ.

ಈ ಬಗ್ಗೆ ಭಾರತೀಯ ನೌಕಾಪಡೆ ಪ್ರತಿಕ್ರಿಯೆ ನೀಡಿದ್ದು ಫೋರ್ಬ್ಸ್ ನ ವರದಿಯನ್ನು ದೃಢಪಡಿಸುವುದು ಸಾಧ್ಯವಿಲ್ಲ. ಆದರೆ ಚೀನಾದ ಸಂಶೋಧನಾ ಹಡಗುಗಳು ಹಿಂದೂಮಹಾಸಾರದಲ್ಲಿ ಸಂಚರಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.

SCROLL FOR NEXT