ದೇಶ

ದೇಶದಲ್ಲಿ ಕೊರೋನಾಗೆ 18 ಬಲಿ, 650 ಮಂದಿಗೆ ಸೋಂಕು, ಆದರೂ ದೆಹಲಿಯಲ್ಲಿ ಇ-ಕಾಮರ್ಸ್ ಗೆ ಅನುಮತಿ

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಗುರುವಾರ 18ಕ್ಕೆ ಏರಿದ್ದು, ಸೋಂಕಿತ ಸಂಖ್ಯೆಯೂ 650ಕ್ಕೆ ಏರಿಕೆಯಾಗಿದೆ. ಆದರೂ ಎಚ್ಚೆತ್ತುಕೊಳ್ಳದ ದೆಹಲಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಫೂಡ್ ಡೆಲಿವೆರಿಗೆ ಅನುಮತಿ ನೀಡಿದೆ.

ದೇಶಾದ್ಯಂತ ಕೊರೋನಾ ಪೀಡಿತರ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಗುಜರಾತ್, ತಮಿಳುನಾಡು, ಮಧ್ಯ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ಓರ್ವರು ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಕಾಶ್ಮೀರದಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದು, ಇದು ಕಣಿವೆ ರಾಜ್ಯದಲ್ಲಿ ಸಂಭವಿಸಿದ ಮೊದಲ ಸಾವು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಮಧ್ಯೆ, ತಮಿಳುನಾಡಿನಲ್ಲಿ ಇಂಡೋನೆಷ್ಯಾದಿಂದ ಎಂಟು ಪ್ರಜೆಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 650ಕ್ಕೆ ಏರಿಕೆಯಾಗಿದೆ.

ಇನ್ನು ದೆಹಲಿ ಸರ್ಕಾರ, ಅಗತ್ಯ ವಸ್ತುಗಳನ್ನು ಪೂರೈಸುವ ಅಂಗಡಿಗಳಿಗೆ ದಿನದ 24 ಗಂಟೆಯೂ ತೆರೆದಿಡಲು ಅವಕಾಶ ನೀಡಿದ್ದು, ಫೂಡ್ ಡೆಲಿವೆರಿಗೂ ಅನುಮತಿ ನೀಡಿದೆ.

ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು, ಜನ ಸಂದಣಿ ತಡೆಯುವುದಕ್ಕಾಗಿ ಅಗತ್ಯ ವಸ್ತುಗಳನ್ನು ಪೂರೈಸುವ ಅಂಗಡಿಗಳಿಗೆ 24 ಗಂಟೆ ತೆರೆದಿಡಲು ಅನುಮತಿ ನೀಡಬೇಕು. ಪೊಲೀಸ್ ಇಲಾಖೆ ಅಗತ್ಯ ವಸ್ತುಗಳನ್ನು ಪೂರೈಸಲು ಇ-ಕಾಮರ್ಸ್ ಸಂಸ್ಥೆಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಯಾವ ಇ-ಕಾಮರ್ಸ್ ಸಂಸ್ಥೆಗಳಿಗೆ ಅನುಮತಿ ನೀಡಬೇಕು ಎಂಬುದನ್ನು ದೆಹಲಿ ಪೊಲೀಸ್ ಇಲಾಖೆ ನಿರ್ಧರಿಸಲಿದೆ ಎಂದು ಬೈಜಾಲ್ ಅವರು ತಿಳಿಸಿದ್ದಾರೆ.

SCROLL FOR NEXT