ದೇಶ

ಲಾಕ್ ಡೌನ್ ಗೆ ಸೋನಿಯಾ ಬೆಂಬಲ: ವೈದ್ಯರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಮೋದಿಗೆ ಪತ್ರ

Nagaraja AB

ನವದೆಹಲಿ: ಕೊರೋನಾವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 21 ದಿನಗಳ ಲಾಕ್ ಡೌನ್ ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಅಲ್ಲದೇ ವೈದ್ಯರ ಸುರಕ್ಷತೆ, ಸಲಕರಣೆಗಳು ಸುಲಭ ಪೂರೈಕೆ, ಸಾಲ ಮುಂದೂಡಿಕೆ ಸೇರಿದಂತೆ ಮತ್ತಿತರ ಸಲಹೆಗಳನ್ನು ಸೂಚಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾವೈರಸ್ ದೇಶದಲ್ಲಿ ಸಾರ್ವಜನಿಕರ ಮೇಲೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ದು:ಖ, ನೋವುಗಳಿಗೆ ಕಾರಣವಾಗುತ್ತಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 
ಇದು ಬದುಕನ್ನು  ದುರ್ಬಲಗೊಳಿಸಿದೆ,  ಲಕ್ಷಾಂತರ ಜನರ ಬದುಕು ಹಾಗೂ ಜೀವನೋಪಾಯವನ್ನು ಅಪಾಯ ತಂದೊಡಿದೆ.  ವಿಶೇಷವಾಗಿ, ಸಮಾಜದ ಅತ್ಯಂತ ದುರ್ಬಲ ವರ್ಗಗಳು ಸಂಕಷ್ಟಕ್ಕೆ ಸಿಲುಕಿವೆ. ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧದ ಸಮರದಲ್ಲಿ ಇಡೀ ರಾಷ್ಟ್ರವು ಒಟ್ಟಾಗಿ ನಿಲ್ಲಲಿದೆ ಎಂದು ಸೋನಿಯಾ ಹೇಳಿದ್ದಾರೆ.

ಕೊರೋನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ 21 ದಿನಗಳ ಲಾಕ್ ಡೌನ್ ಸ್ವಾಗತಾರ್ಹ ಕ್ರಮವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ, ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನೂ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಮತ್ತು ಸಹಕರಿಸುತ್ತೇವೆ ಎಂದು ಹೇಳಲು ಬಯಸುವುದಾಗಿ ಸೋನಿಯಾ ತಿಳಿಸಿದ್ದಾರೆ.

ವೈದ್ಯರು, ನರ್ಸ್ ಗಳು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗಾಗಿ ಎನ್ -95 ಮಾಸ್ಕ್ , ಹಜ್ಮತ್ ಸೂಟ್ ಮತ್ತಿತರ ಸಲಕರಣೆಗಳ ಅಗತ್ಯವಿದೆ. ಇಂತಹ ಸಲಕರಣೆಗಳ ಉತ್ಪಾದನೆ ಹಾಗೂ ಸಲಕರಣೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ. 

ಮಾರ್ಚ್ 1 ರಿಂದ ಆರು ತಿಂಗಳ ಅವಧಿಗೆ ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ವಿಶೇಷ  ಅಪಾಯ ಭತ್ಯೆ ( ರಿಸ್ಕ್ ಅಲೋಯನ್ಸ್ ) ನೀಡಬೇಕು ಹಾಗೂ ರೈತರು , ವೇತನದಾರರರು ಸೇರಿದಂತೆ ಮತ್ತಿತರಿಂದ ಸಾಲ ಮರುಪಾವತಿಯನ್ನು ಆರು ತಿಂಗಳ ಕಾಲ ಮುಂದೂಡುವಂತೆ ಸೋನಿಯಾ ಗಾಂಧಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. 

SCROLL FOR NEXT