ದೇಶ

22 ಲಕ್ಷ ವಲಸಿಗರಿಗೆ ಊಟ ನೀಡಲಾಗುತ್ತಿದೆ: ಸುಪ್ರೀಂ ಕೋರ್ಟಿಗೆ ಕೇಂದ್ರ ಮಾಹಿತಿ

Raghavendra Adiga

ನವದೆಹಲಿ: ಕೊರೋನಾವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶಾದ್ಯಂತ ವಲಸೆ ಕಾರ್ಮಿಕರಿಗೆ ಆಹಾರ, ನೀರು ಮತ್ತು ಆಶ್ರಯದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ನಿರ್ದೇಶನಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಂಗಳವಾರ  ಸ್ಥಿತಿ ವರದಿ ಸಲ್ಲಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರನ್ನೊಳಗೊಂಡ ನ್ಯಾಯಪೀಠ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅರ್ಜಿಯ ವಿಚಾರಣೆಯನ್ನು ಮುಂದುವರಿಸಿದೆ.

ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ವಿವರವಾದ ಸ್ಥಿತಿ ವರದಿಯನ್ನು ಸಲ್ಲಿಸಿದ್ದು, ನಿರ್ಗತಿಕ, ವಲಸೆ ಮತ್ತು ದೈನಂದಿನ ಕೂಲಿ ಕಾರ್ಮಿಕರು ಸೇರಿದಂತೆ 22 ಲಕ್ಷ 88 ಸಾವಿರ ಜನರಿಗೆ ಆಹಾರವನ್ನು ಒದಗಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು 24 ಗಂಟೆಗಳ ಒಳಗೆ ತಜ್ಞರ ಸಮಿತಿಯನ್ನು ರಚಿಸುವಂತೆ ಸಿಜೆಐ  ಬೊಬ್ಡೆ  ಮೆಹ್ತಾಅವರಿಗೆ ಹೇಳಿದ್ದಾರೆ. ಕಳೆದ ಜನಗಣತಿಯ ಪ್ರಕಾರ ಕೆಲಸಕ್ಕಾಗಿ ವಲಸೆ ಬಂದಿರುವ  ಕೂಲಿ ಕಾರ್ಮಿಕರು ದೇಶದಲ್ಲಿ ಸುಮಾರು 4.14 ಕೋಟಿ ಜನರಿದ್ದಾರೆ ಎಂದು ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

"ಕೊರೋನಾ ಭಯದಿಂದಾಗಿ ಈಗ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.ಇಡೀ ದೇಶವನ್ನು ಲಾಕ್ ಡೌನ್ ಮಾಡಿದ್ದಾಗ ಜನರು ಪರಸ್ಪರ ಬೆರೆಯುವುದಿಲ್ಲ.  ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಇದೇ ವೇಳೆ ನಾವು ಯಾವುದೇ ವಲಸೆಗೆ ಅನುಮತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತೇವೆ" ವಲಸೆ ಹಳ್ಳಿಗರ ಪಾಲಿಗೆ ಅಪಾಯಕಾರಿಯಾಗಿದೆ. ಇಲ್ಲಿಯವರೆಗೆ ಗ್ರಾಮೀಣ ಭಾರತವು ಕೋವಿಡ್ 19 ನಿಂದ ಪ್ರಭಾವಿತವಾಗಿಲ್ಲ ಎಂದು ಅವರು ಹೇಳಿದ್ದಾರೆ.ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶವು ಬೃಹತ್ ರ್ವಭಾವಿ ಮತ್ತು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮೆಹ್ತಾ ಹೇಳಿದರು.

ವೈರ್ಸ್ ಬಗೆಗೆ ಮಾಹಿತಿ ಜನವರಿ 5, 2020 ರಂದು ಭಾರತ ಸರ್ಕಾರಕ್ಕೆ ಲಭಿಸಿತ್ತು. ಈ ರೋಗದ ವಿರುದ್ಧ ಹೋರಾಟಕ್ಕಾಗಿ ಕೇಂದ್ರ ಸರ್ಕಾರ ಜನವರಿ 17 ರಿಂದ ತನ್ನ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಮೆಹ್ತಾ ಸುಪ್ರೀಂಗೆ ತಿಳಿಸಿದ್ದಾರೆ.

SCROLL FOR NEXT