ದೇಶ

ಲಾಕ್ ಡೌನ್: ತೆಲಂಗಾಣದಿಂದ ವಿಶೇಷ ರೈಲಿನಲ್ಲಿ ಜಾರ್ಖಂಡ್ ಗೆ ತೆರಳಿದ ವಲಸೆ ಕಾರ್ಮಿಕರು 

Lingaraj Badiger

ಹೈದರಾಬಾದ್: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಕಳೆದ ಒಂದೂವರೆ ತಿಂಗಳಿಂದ ತೆಲಂಗಾಣದ ಲಿಂಗಂಪಲ್ಲಿಯಲ್ಲಿ ಸಿಲುಕಿದ್ದ ಜಾರ್ಖಂಡ್ ಕಾರ್ಮಿಕರನ್ನು ತವರಿಗೆ ಕಳುಹಿಸಿಕೊಡಲು ಭಾರತೀಯ ರೈಲ್ವೆ ಮೊದಲ ಬಾರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ.

ಕಾರ್ಮಿಕರ ದಿನದಂದೆ ಸುಮಾರು 1200 ಕಾರ್ಮಿಕರನ್ನು ಹೊತ್ತ ರೈಲು ಲಿಂಗಂಪಲ್ಲಿಯಿಂದ ಜಾರ್ಖಂಡ್ ನ ಹತಿಯಾಗೆ ಪ್ರಯಾಣ ಬೆಳಸಿದೆ ಎಂದು ರೇಲ್ವೆ ರಕ್ಷಣಾ ಪಡೆಯ ಮಹಾ ನಿರ್ದೇಶಕ ಅರುಣ್ ಕುಮಾರ್ ಅವರು ಹೇಳಿದ್ದಾರೆ.

ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ನಂತರ ಸಾವಿರಾರು ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೇ ಹಲವು ನಗರಗಳಲ್ಲಿ ಸಿಲುಕಿದ್ದರು. ಇನ್ನು ಹಲವರು ನೂರಾರು ಕಿ.ಮೀ. ನಡೆದುಕೊಂಡೇ ತಮ್ಮ ಊರು ತಲುಪಿದ್ದರು.

ಕಳೆದ ಬುಧವಾರ ಕೇಂದ್ರ ಗೃಹ ಸಚಿವಾಲಯ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲು ಅನುಮತಿ ನೀಡಿತ್ತು. ಆದರೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ರೈಲು ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು.

ರಾಜ್ಯಗಳ ಮನವಿಗೆ ಸ್ಪಂದಿಸಿದ ಕೇಂದ್ರ, ತೆಲಂಗಾಣದಲ್ಲಿ ಸಿಲುಕಿದ್ದ 1200 ಜಾರ್ಖಂಡ್ ಕಾರ್ಮಿಕರ ಪ್ರಯಾಣಕ್ಕೆ ರೈಲು ವ್ಯವಸ್ಥೆ ಮಾಡಿದೆ.

ವಿಶೇಷ ರೈಲು ಇಂದು ಬೆಳಗ್ಗೆ 5 ಗಂಟೆಗೆ ಲಿಂಗಂಪಲ್ಲಿಯಿಂದ ಹೊರಟಿದ್ದು, ರಾತ್ರಿ 11 ಗಂಟೆಗೆ ಹತಿಯಾ ತಲುಪುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಒಂದು ಬೋಗಿಯಲ್ಲಿ 72 ಸೀಟ್ ಗಳಿರುತ್ತವೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಂದು ಬೋಗಿಯಲ್ಲಿ 54 ಮಂದಿಯನ್ನು ಮಾತ್ರ ಕರೆದೊಯ್ಯಲಾಗಿದೆ. 

SCROLL FOR NEXT