ದೇಶ

ಮತ್ತೆ 30 ಬಿಎಸ್ ಎಫ್ ಯೋಧರಿಗೆ ವಕ್ಕರಿಸಿದ ಕೊರೋನಾ ಸೋಂಕು!

Srinivasamurthy VN

ನವದೆಹಲಿ: ಇಡೀ ದೇಶಾದ್ಯಂತ ತನ್ನ ಆರ್ಭಟ ಮುಂದುವರೆಸಿರುವ ಕೊರೋನಾ ವೈರಸ್ ಗೆ ದೇಶ ಕಾಯುವ ಯೋಧರೂ ಕೂಡ ಬಲಿಯಾಗುತ್ತಿದ್ದು, ಇದೀಗ ಮತ್ತೆ ಮೂವತ್ತು ಮಂದಿ ಬಿಎಸ್ ಎಫ್ ಯೋಧರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಗಡಿ ಭದ್ರತಾ ಪಡೆ (Border Security Force-BSF) ಮಾಹಿತಿ ನೀಡಿದ್ದು, ಇಂದು ಮತ್ತೆ 30 ಮಂದಿ ಬಿಎಸ್ಎಫ್ ಯೋಧರಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದ್ದು, ಎಲ್ಲರನ್ನೂ ಸುಸಜ್ಜಿತ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದೆ.

ಬಿಎಸ್ ಎಫ್ ನೀಡಿರುವ ಮಾಹಿತಿ ಅನ್ವಯ ತ್ರಿಪುರಾ ಮತ್ತು ದೆಹಲಿಯಲ್ಲಿ ಕಾರ್ಯ ನಿರತವಾಗಿದ್ದ 30 ಮಂದಿ ಯೋಧರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 6 ಮಂದಿ ದೆಹಲಿಯಲ್ಲಿ ಮತ್ತು 24 ಮಂದಿ ತ್ರಿಪುರಾದಲ್ಲಿ ಕಾರ್ಯ ನಿರತರಾಗಿದ್ದರು. ಪ್ರಸ್ತುತ ಎಲ್ಲ ಯೋಧರನ್ನು ದೆಹಲಿಯ  ಏಮ್ಸ್, ಝಜ್ಜರ್ ಮತ್ತು ಅಗರ್ತಲಾದಲ್ಲಿರುವ ಜಿಬಿ ಪಂತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದೆ,

ಇನ್ನು ದೇಶದಲ್ಲಿ ಒಟ್ಟಾರೆ ಕಳೆದ 24 ಗಂಟೆಗಳಲ್ಲಿ 3,390 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 56342ಕ್ಕೆ ತಲುಪಿದೆ. ಜೊತೆಗೆ ಮತ್ತೆ 83 ಮಂದಿ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ ಕೂಡ 1886ಕ್ಕೆ ಏರಿಕೆಯಾಗಿದೆ. ಈ ನಡುವೆ  56342 ಮಂದಿ ಸೋಂಕಿತರ ಪೈಕಿ 16,539 ಮಂದಿ ವೈರಸ್'ನಿಂದ ಗುಣಮುಖರಾಗಿದ್ದು, ಇದರೊಂದಿಗೆ ಗುಣಮುಖರಾಗುತ್ತಿರುವ ಶೇಕಡವಾರು 28.83ರಷ್ಟಿದೆ. 

SCROLL FOR NEXT