ದೇಶ

ಮದ್ಯ ಮಾರಾಟದ ಬದಲು ಹೋಂ ಡೆಲಿವರಿ ಮಾಡುವ ಕುರಿತು ರಾಜ್ಯ ಸರ್ಕಾರಗಳು ಚಿಂತಿಸಲಿ: ಸುಪ್ರೀಂ ಕೋರ್ಟ್‌ ಸಲಹೆ

Srinivasamurthy VN

ನವದೆಹಲಿ: ಮಾರಕ ಕೊರೋನಾ ವೈರಸ್ ಅಬ್ಬರ ಭಾರತದಲ್ಲಿ ಜೋರಾಗಿರುವಂತೆಯೇ ಕೇಂದ್ರ ಸರ್ಕಾರ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡಿದ್ದು, ಮದ್ಯ ಮಾರಾಟದ ಬದಲು ಹೋಂ ಡಿಲಿವರಿ  ಮಾಡುವ ಕುರಿತು ರಾಜ್ಯ ಸರ್ಕಾರಗಳು ಚಿಂತಿಸಲಿ ಎಂದು ಸಲಹೆ ನೀಡಿದೆ.

ಕೊರೋನಾ ಕಾರಣಕ್ಕೆ ಭಾರತದಲ್ಲಿ ಮೂರು ಹಂತದಲ್ಲಿ ಲಾಕ್‌ ಡೌನ್ ಅನ್ನು ಘೋಷಿಸಲಾಗಿತ್ತು. ಅಲ್ಲದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜನರಿಗೆ ಸೂಚನೆಯನ್ನೂ ನೀಡಲಾಗಿತ್ತು. ಇದೇ ಕಾರಣಕ್ಕೆ ಬರೋಬ್ಬರಿ 45  ದಿನಗಳ ಕಾಲ ದೇಶದಾದ್ಯಂತ ಮದ್ಯ  ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ ಲಾಕ್‌ಡೌನ್ ಸಡಿಲಿಸಿರುವ ಕಾರಣ ಕಳೆದ ಸೋಮವಾರದಿಂದ ದೇಶದೆಲ್ಲೆಡೆ ಮದ್ಯ ಮಾರಾಟ ಆರಂಭವಾಗಿದ್ದು, ಮದ್ಯದಂಗಡಿಗಳ ಮೇಲೆ ಮುಗಿ ಬಿದ್ದಿರುವ ಮದ್ಯಪ್ರಿಯರು ಸಾಮಾಜಿಕ ಅಂತರ ಮತ್ತು ಇತರೆ ಮುಂಜಾಗ್ರತಾ  ಕ್ರಮಗಳನ್ನು ಮರೆತು ಮದ್ಯ ಖರೀದಿ ಮಾಡುತ್ತಿದ್ದಾರೆ. ಇದೇ ವಿಚಾರ ಅನೇಕರ ಆಕ್ರೋಶಕ್ಕೆ ಕಾರಣವಾಗಿದ್ದು, ಮದ್ಯದ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಿದೆ, ಇದರಿಂದ ಕೊರೊನಾ ವ್ಯಾಪಕವಾಗಿ ಹರಡಲಿದೆ" ಎಂದು ಸುಪ್ರೀಂ ಕೋರ್ಟ್‌‌ನಲ್ಲಿ ಪಿಐಎಲ್‌ ದಾಖಲಿಸಲಾಗಿದೆ. 

ಇಂದು ಈ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, 'ಸಾಮಾಜದಲ್ಲಿ ಕೊರೋನಾ ಹರಡದಂತೆ ನೋಡಿಕೊಳ್ಳಲು ಹಾಗೂ ಸಾಮಾಜಿಕ ಅಂತರದ ಹಿತದೃಷ್ಟಿಯಿಂದ ಎಲ್ಲಾ ರಾಜ್ಯಗಳು ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡುವ ಬದಲು ಹೋಂ ಡೆಲಿವರಿ ಮಾಡುವುದು ಸೂಕ್ತ.  ಸಾಮಾಜಿಕ ಅಂತರದ ದೃಷ್ಟಿಯಿಂದ ಹೋಂ ಡಿಲಿವರಿ ಸೂಕ್ತ. ಆನ್‌ಲೈನ್ ಮೂಲಕ ಮನೆಗಳಿಗೆ ಮದ್ಯವನ್ನು ವಿತರಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

SCROLL FOR NEXT