ದೇಶ

ಛತ್ತೀಸ್ ಗಡ ಎನ್ ಕೌಂಟರ್: ನಾಲ್ವರು ನಕ್ಸಲರ ಹತ್ಯೆ, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ

Sumana Upadhyaya

ರಾಯಪುರ: ಛತ್ತೀಸ್ ಗಡದ ರಾಜಾನಂದಗಾಂವ್ ಜಿಲ್ಲೆಯಲ್ಲಿ ಕಳೆದ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರ ಹತ್ಯೆಯಾಗಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಡಿಎಂ ಅವಸ್ಥಿ ತಿಳಿಸಿದ್ದಾರೆ.

ರಾಜಾನಂದಗಾಂವ್‌ನ ಮದನ್ವಾಡ ಪ್ರದೇಶದ ಕಾಡುಗಳಲ್ಲಿ ನಕ್ಸಲರು ಇರುವ ಬಗ್ಗೆ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿದ್ದರು. ಈ ಮಧ್ಯೆ ನಕ್ಸಲರು ವಿವೇಚನೆಯಿಲ್ಲದೆ ಗುಂಡು ಹಾರಿಸಲು ಪ್ರಾರಂಭಿಸಿದರು.

ಭದ್ರತಾ ಪಡೆಗಳು ನಕ್ಸಲರ ಮೇಲೆ ಗುಂಡು ಹಾರಿಸಿ ಪ್ರತಿದಾಳಿ ನಡೆಸಿದವು. ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವಿನ ಸುದೀರ್ಘ ಚಕಮಕಿಯ ಬಳಿಕ ಮದನ್ವಾಡಾ ಎಸ್‌ಎಚ್‌ಒ ಶ್ಯಾಮ್ ಕಿಶೋರ್ ಶರ್ಮಾ ಅವರು ಗುಂಡೇಟಿನಿಂದ ಗಾಯಗೊಂಡು ಹುತಾತ್ಮರಾಗಿದ್ದಾರೆ.

ಮೃತ ನಾಲ್ವರು ನಕ್ಸಲೈಟ್‌ಗಳಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಪೊಲೀಸರು ಒಂದು ಎಕೆ 47 ರೈಫಲ್, ಒಂದು ಎಸ್‌ಎಲ್‌ಆರ್ ಮತ್ತು 12 ಬೋರ್ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.

ನಕ್ಸಲೈಟ್ ಹಿಂಸಾಚಾರದಿಂದ ಮದನ್ವಾಡಾ ಹೆಚ್ಚು ಪರಿಣಾಮ ಬೀರಿದೆ. ಈ ಪ್ರದೇಶವು 2009 ರಲ್ಲಿ ದೇಶದಲ್ಲಿ ಹೆಚ್ಚು ಸುದ್ದಿಗೆ ಬಂದಿದ್ದು, ಆಗಿನ ರಾಜನಂದಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 29 ಪೊಲೀಸ್ ಸಿಬ್ಬಂದಿ ನಕ್ಸಲರರೊಂದಿಗಿನ ಮುಖಾಮುಖಿಯಲ್ಲಿ ಕೊಲ್ಲಲ್ಪಟ್ಟರು.

SCROLL FOR NEXT