ದೇಶ

ಕಾರ್ಖಾನೆ ಸ್ಥಳಾಂತರಕ್ಕೆ ಒತ್ತಾಯಿಸಿ ವಿಶಾಖಪಟ್ಟಣಂನಲ್ಲಿ ಗ್ರಾಮಸ್ಥರ ಪ್ರತಿಭಟನೆ

Sumana Upadhyaya

ವಿಶಾಖಪಟ್ಟಣಂ: ಅನಿಲ ಸೋರಿಕೆ ಉಂಟಾಗಿ ಹಲವು ಜನರ ಸಾವಿಗೆ ಕಾರಣವಾದ ಎಲ್ ಜಿ ಪಾಲಿಮರ್ಸ್ ಕೈಗಾರಿಕಾ ಘಟಕವನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ಅಕ್ಕಪಕ್ಕದ ಹಳ್ಳಿಗಳ ನೂರಾರು ಮಂದಿ ಮೊನ್ನೆಯ ದುರ್ಘಟನೆಯಲ್ಲಿ ಸತ್ತ ವ್ಯಕ್ತಿಯ ಶವವನ್ನು ತಂದು ಕಾರ್ಖಾನೆ ಮುಂದೆ ಪ್ರತಿಭಟವನೆ ಮಾಡಿದರು.

ಈ ಹಠಾತ್ ಘಟನೆಯಿಂದ ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನು ಹಿಂದಕ್ಕೆ ಕಳುಹಿಸಲು ಪ್ರಯತ್ನಿಸಿದರು. ಇಂದಿನ ಪ್ರತಿಭಟನೆಯಲ್ಲಿ ಬಹುತೇಕರು ಯುವಕರಿದ್ದರು. ಅನಿಲ ಸೋರಿಕೆಯಾಗಿರುವ ಪ್ರದೇಶವನ್ನು ಸದ್ಯ ನಿಷೇಧಾಜ್ಞೆಯ ಪ್ರದೇಶವೆಂದು ಗುರುತಿಸಲಾಗಿದೆ.

ಪ್ರತಿಭಟನಾಕಾರರು ಹಿಂದಕ್ಕೆ ಹೋಗಲು ನಿರಾಕರಿಸಿದಾಗ ಪೊಲೀಸರು ಕೆಲವರನ್ನು ಬಂಧಿಸಿದ ಘಟನೆ ಕೂಡ ನಡೆಯಿತು. ಆದರೆ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ವಿಫಲರಾದರು. ಪ್ರತಿಭಟನಾ ನಿರತ ಯುವಕರ ಗುಂಪು ಕಾರ್ಖಾನೆ ಬಳಿ ಬಂದು ವ್ಯವಸ್ಥಾಪಕರ ವಿರುದ್ಧ ಘೋಷಣೆ ಕೂಗಿದರು.

ಮೃತ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡಿದರೆ ಸಾಕಾಗುವುದಿಲ್ಲ, ಕಾರ್ಖಾನೆಯನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು. ಎಲ್ ಜಿ ಪಾಲಿಮರ್ಸ್ ಕಾರ್ಖಾನೆಯ ಮಾಲೀಕರು ಜನರ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ. ಅನಿಲ ಸೋರಿಕೆಯಾಗುವ ಸಂದರ್ಭದಲ್ಲಿ ಕೂಡ ಜನರಿಗೆ ಎಚ್ಚರಿಕೆ ನೀಡಲಿಲ್ಲ ಎಂದು ಆರೋಪಿಸಿದರು.

ವೆಂಕಟಾಪುರಂ ಹೊರತುಪಡಿಸಿ ಬೇರೆ ಗ್ರಾಮಗಳ ಜನರು ಮನೆಗಳಲ್ಲಿ ಒಬ್ಬ ಪುರುಷರನ್ನು ರಕ್ಷಣೆಗೆಂದು ಇರಿಸಿ ಬೇರೆಲ್ಲರೂ ತೊರೆಯಬೇಕಾದ ಪರಿಸ್ಥಿತಿ ಬಂದಿದೆ. ಇದಕ್ಕೆ ಯಾರು ಕಾರಣರು, ಕುಡಿಯಲು ನೀರು ಸಹ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

SCROLL FOR NEXT