ದೇಶ

ತೆಲಂಗಾಣ: ಲಾಕ್ ಡೌನ್ ನಿಂದಾಗಿ 300 ಕಿ.ಮೀ ನಡೆದು ಸುಸ್ತಾಗಿದ್ದ ವಲಸೆ ಕಾರ್ಮಿಕ ಬಿಸಿಲಿನ ತಾಪದಿಂದ ಸಾವು

Lingaraj Badiger

ಹೈದರಾಬಾದ್: ಕೊವಿಡ್-19 ಲಾಕ್ ಡೌನ್ ಪರಿಣಾಮ 21 ವರ್ಷದ ವಲಸೆ ಕಾರ್ಮಿಕನೊಬ್ಬ ಒಡಿಶಾವನ್ನು ತಲುಪಲು ಮೂವರು ಸ್ನೇಹಿತರೊಂದಿಗೆ ಹೈದರಾಬಾದ್ ನಿಂದ 300 ಕಿ.ಮೀ ನಡೆದು, ಭದ್ರಾಚಲಂನಲ್ಲಿ ನಡೆದ ಬಿಸಿಲಿನ ತಾಪದಿಂದ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಭಾನುವಾರ ಹೈದರಾಬಾದ್ ನಿಂದ ಹೊರಟ ಈ ಕಾರ್ಮಿಕರು, ಒಡಿಶಾದ ಮಲ್ಕನಗಿರಿ ತಲುಪಬೇಕಿತ್ತು. ಆದರೆ ಮಂಗಳವಾರ ಭದ್ರಾಚಲಂ ತಲುಪುತ್ತಿದ್ದಂತೆ ಓರ್ವ ಕಾರ್ಮಿಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ವಾಂತಿಯಾಗಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ಆತನ ಸ್ನೇಹಿತರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದಾರಿ ಮಧ್ಯೆಯೇ ಕಾರ್ಮಿಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಸಿಲಿನ ಹೊಡೆತದಿಂದ ಕಾರ್ಮಿಕ ಮೃತಪಟ್ಟಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. 

ಮೃತ ಕಾರ್ಮಿಕ ಕಳೆದ ಸೋಮವಾರದಿಂದ ಊಟ ಮಾಡಿರಲಿಲ್ಲ ಎಂದು ಆತನ ಸ್ನೇಹಿತರು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು ಮೃತ ಕಾರ್ಮಿಕನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಮೃತ ದೇಹವನ್ನು ಮಲ್ಕನಗಿರಿಗೆ ಕೊಂಡೊಯ್ಯಲು ವಾಹನ ವ್ಯವಸ್ಥೆ ಮಾಡಿದ್ದಾರೆ.

SCROLL FOR NEXT